ಪುತ್ತೂರು: ವಿವೇಕಾನಂದ ಜಯಂತಿ ಕಾರ್ಯಕ್ರಮದ ಸಮಾಜದ ನಾಗರಿಕ ಸಮುದಾಯಗಳ ಮಧ್ಯೆ ಪರಸ್ಪರ ದ್ವೇಷ ಉಂಟಾಗುವ ರೀತಿಯಲ್ಲಿ ದ್ವೇಷ ಭಾಷಣ ಮಾಡಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಈ ದ್ವೇಷ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನಲ್ ಮೇಲೆಯೂ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಮಾನವ ಬಂಧಿತ್ವ ವೇದಿಕೆಯಿಂದ ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಜ.12ರಂದು ವಿವೇಕಾನಂದ ಕಾಲೇಜಿನ ಅವರಣದಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಹದಿ ಹರೆಯದ ಬಾಲಕ ಬಾಲಕಿಯರು ಭಾಗವಹಿಸಿದ್ದ ಸಭೆಯಲ್ಲಿ ದ್ವೇಷ ಭಾಷಣ ಮಾಡಿದ್ದಾರೆ. ದ್ವೇಷ ಭಾಷಣದಲ್ಲಿ ಮುಸಲ್ಮಾನರ ಮತ್ತು ಕ್ರೈಸ್ತರ ಮೇಲೆ ಹಿಂಸೆ ಮಾಡಲು ಪ್ರಚೋದಿಸುತ್ತಾರೆ. ಇದು ಅಲ್ಲಿ ಸೇರಿರುವವರಿಗೆ, ಅದರಲ್ಲೂ ಮುಖ್ಯವಾಗಿ ಎಳೆಯ ಪ್ರಾಯದ ವಿದ್ಯಾರ್ಥಿಗಳಿಗೆ ಹಾಗೂ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಿದ ಸಾವಿರಾರು ಜನರಿಗೆ ಮುಸಲ್ಮಾನ ಮತ್ತು ಕ್ರೈಸ್ತ ಜನಾಂಗದ ಮೇಲೆ ದ್ವೇಷ ಹುಟ್ಟುವಂತೆ ದ್ವೇಷ ಭಾಷಣ ಮಾಡಿ, ಹಿಂಸೆಯನ್ನು ಪ್ರಚೋದಿಸಿರುತ್ತಾರೆ. ದ್ವೇಷ ಭಾಷಣ ಮಾಡದಂತೆ ನ್ಯಾಯಾಲಯ ಷರತ್ತು ವಿಧಿಸಿದ್ದರೂ, ಅದನ್ನು ಉಲ್ಲಂಘಿಸಿ, ಈಗ ಮತ್ತೆ ಪುನಃ ದ್ವೇಷ ಭಾಷಣ ಮಾಡುವುದರ ಮೂಲಕ ಸಮಾಜದಲ್ಲಿ ದ್ವೇಷ, ಮತ್ತು ಹಿಂಸೆಯನ್ನು ಪ್ರೇರೇಪಿಸುವ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದ್ವೇಷ ಭಾಷಣ ಮಾಡಿದ ಡಾ.ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮತ್ತು ಈ ದ್ವೇಷ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನಲ್ ಮೇಲೆಯೂ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸಿಕೊಡಬೇಕಾಗಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ತಾಲೂಕು ಸಮಿತಿ ಅಧ್ಯಕ್ಷ ಅಮಳ ರಾಮಚಂದ್ರ ಕೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂದರ್ಭ ಎಂ.ಬಿ ವಿಶ್ವನಾಥ ರೈ, ಮೌರಿಸ್ ಮಸ್ಕರೇನಸ್, ಎಚ್ ಮಹಮ್ಮದ್ ಆಲಿ, ಕೆನ್ಯೂಟ್ ಮಸ್ಕರೇನಸ್, ಡಾ. ರಾಜಾರಾಮ್ ಕೆ.ಬಿ, ಬೋಲೋಡಿ ಚಂದ್ರಹಾಸ ರೈ, ಶಶಿಕಿರಣ್ ರೈ, ಅಬ್ದುಲ್ ರೆಹಮಾನ್ ಯೂನಿಕ್, ಉಲ್ಲಾಸ್ ಕೋಟ್ಯಾನ್, ಪ್ರಕಾಶ್ ಗೌಡ ತೆಂಕಿಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *