ಪುತ್ತೂರು: ಮಂಡ್ಯ ಡಿಎಚ್‍ಒ ಅವರನ್ನು ಮೈಸೂರು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆದೇಶ ಪತ್ರದ ಬಗ್ಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಮಾತನಾಡಿದ ಅವರು, ಆ ವರ್ಗಾವಣೆ ಆದೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿ ಇರುವುದಾಗಿ ಕಾಣುತ್ತಿದೆಯಾದರೂ, ದಿನಾಂಕ ಹಾಗೂ ಕಚೇರಿ ನಂಬರ್ ನಮೂದಿಸಿಲ್ಲ ಎಂದು ಹೇಳಿದರು. “ಇದು ನಿಜವಾದ ಆದೇಶವೇ ಅಥವಾ ಕಳ್ಳಪತ್ರವೇ ಎಂಬುದನ್ನು ಮುಖ್ಯಮಂತ್ರಿ ಸ್ವತಃ ಸ್ಪಷ್ಟಪಡಿಸಬೇಕು,” ಎಂದು ಒತ್ತಾಯಿಸಿದರು.

“ಒಂದು ವೇಳೆ ಸಹಿ ನಿಮ್ಮದಾಗಿಲ್ಲ ಎಂದಾದರೆ, ಅದು ಹೇಗೆ ಹೊರಬಂದಿತು? ನಿಮ್ಮ ಕಚೇರಿಯವರೇ ಸೃಷ್ಟಿ ಮಾಡಿದ್ದಾರಾ? ಬೇರೆ ಯಾರಾದರೂ ನಿಮ್ಮ ಸಹಿಯನ್ನು ನಕಲಿ ಮಾಡಿದ್ದಾರಾ? ಕಂಪ್ಯೂಟರ್ ಕಳವು ಆಯಿತೆಂದು ಹೇಳುವುದಾದರೆ, ಅದೇ ಕಂಪ್ಯೂಟರ್‌ನಿಂದ ಸಹಿ ಹಾಕಿದ ಪತ್ರ ಹೊರಬಂದಿತೆಂದರ್ಥವೇ?” ಎಂದು ಪ್ರಶ್ನೆಗಳ ಸುರಿಮಳೆಗೈದರು.
ಡಾಕ್ಟರ್‌ಗೆ ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿರುವುದರ ಕುರಿತು ಸಹ ಅವರು ಪ್ರಶ್ನೆ ಎತ್ತಿ, “ಡಾಕ್ಟರ್‌ಗೂ ಬಾಟಲ್‌ಗೂ ಏನು ಸಂಬಂಧ?” ಎಂದು ವ್ಯಂಗ್ಯವಾಡಿದರು.
ಈ ವಿಷಯದಲ್ಲಿ ಸಂಪೂರ್ಣ ತನಿಖೆ ನಡೆಯಬೇಕು. ಆದೇಶ ನಿಜವೋ ಕಳ್ಳಪತ್ರವೋ ಎಂಬುದು ಜನರಿಗೆ ಸ್ಪಷ್ಟವಾಗಬೇಕು. ಅದನ್ನು ಹೊರಗೆ ತಂದವರು ಯಾರು ಎಂಬುದೂ ಬಹಿರಂಗವಾಗಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ, ತಮ್ಮ ವಿರುದ್ಧ ಬಿಜೆಪಿ ನಾಯಕರನ್ನು ದೂರಾಡುವುದನ್ನು ನಿಲ್ಲಿಸಿ ಮೊದಲು ಜನರ ಮುಂದೆ ಸ್ಪಷ್ಟ ನಿಲುವು ತಾಳಬೇಕು ಎಂದು ಸಿಎಂ ಅವರಿಗೆ ಸಲಹೆ ನೀಡಿದರು.
“ಇದು ನಿಮ್ಮ ಸಹಿಯೇ ಹೌದಾ? ದಿನಾಂಕ, ನಂಬರ್ ಇಲ್ಲದೆ ಯಾಕೆ ಸಹಿ ಹಾಕಿದಿರಿ? ಒತ್ತಡವೇನಾದರೂ ಇತ್ತೇ?” ಎಂದು ಚಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿ, ಸರ್ಕಾರವು ತಕ್ಷಣ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *