ಕಡಬ: ಕಡಬ–ಪಂಜ ರಸ್ತೆಯ ಮುಖ್ಯ ಪೇಟೆ ಭಾಗದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆದಾರನ ಬೇಜವಾಬ್ದಾರಿಯಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ಉಂಟಾಗಿದೆ. ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಇರುವ ಹಿನ್ನೆಲೆಯಲ್ಲಿ ಇದೀಗ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು ವೇದಿಕೆ ಸಿದ್ಧಪಡಿಸಿದ್ದಾರೆ.

ಮುಖ್ಯ ಪೇಟೆಯಿಂದ ಮೆಸ್ಕಾಂ ಕಚೇರಿವರೆಗೆ ರಸ್ತೆ ಡಾಮರೀಕರಣ ಮಾಡಲಾಗಿದೆಯಾದರೂ, ಅಲ್ಲಿಂದ ಓನ್ ತ್ರಡ್ಕ ಶಾಲೆಯವರೆಗೆ ರಸ್ತೆ ಸಂಪೂರ್ಣವಾಗಿ ಗುಂಡಿಬಿದ್ದಿದ್ದು ವಾಹನ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ಸುಮಾರು ಎರಡು ವಾರಗಳ ಹಿಂದೆ ಗುಂಡಿಗಳಲ್ಲಿ ಜಲ್ಲಿ ಹಾಕಲಾಗಿದ್ದರೂ, ಅದು ಇದೀಗ ವಾಹನ ಸವಾರರಿಗೆ ಮತ್ತಷ್ಟು ತೊಂದರೆಯಾಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಕುರಿತು ಕೆಲವು ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕಿ ಭಾಗೀರಥಿ ಮುರುಳ್ಯವರು ಬಾಕಿ ಉಳಿದಿರುವ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದ್ದರು. ಆದರೆ ಶಾಸಕರ ಸೂಚನೆಗೆ ತಿಂಗಳೇ ಕಳೆದರೂ ಕಾಮಗಾರಿ ಆರಂಭಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಗುತ್ತಿಗೆದಾರನ ಈ ನಿರ್ಲಕ್ಷ್ಯ ಹಾಗೂ ವಿಳಂಬ ನೀತಿಯನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಗುತ್ತಿಗೆದಾರನ ಹಳೆಯ ಟೆಂಡರನ್ನು ರದ್ದುಗೊಳಿಸಿ ಕಪ್ಪುಪಟ್ಟಿಗೆ ಸೇರಿಸುವುದರ ಜೊತೆಗೆ, ಹೊಸದಾಗಿ ಟೆಂಡರ್ ಕರೆಯುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ.
ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.

Leave a Reply

Your email address will not be published. Required fields are marked *