ಗಂಗಾವತಿ ತಾಲೂಕಿನ ಚಿಕ್ಕಬೆನಕಲ್ ಗ್ರಾಮದ ಬಳಿ ಭಾವಿ ದಂಪತಿಯ ಜೀವನ ಕೊನೆಗೊಂಡ ದಾರುಣ ರಸ್ತೆ ಅಪಘಾತ ನಡೆದಿದೆ. ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳ ಹಾಗೂ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಕವಿತಾ ಮೃತಪಟ್ಟವರು.

ಈ ತಿಂಗಳ 20ರಂದು ಇವರ ವಿವಾಹ ನಿಶ್ಚಯವಾಗಿದ್ದು, ಅದಕ್ಕಾಗಿ ಇಬ್ಬರು ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗೆ ತೆರಳಿದ್ದರು. ಮುನಿರಾಬಾದ್‌ನ ಪಂಪಾವನ ಮತ್ತು ಕೂಕನಪಳ್ಳಿ ಬೂದೇಶ್ವರ ದೇವಾಲಯ ಪ್ರದೇಶದಲ್ಲಿ ಫೋಟೋಶೂಟ್ ಮುಗಿಸಿಕೊಂಡ ಬಳಿಕ, ಕರಿಯಪ್ಪ ಕವಿತಾಳನ್ನು ಬೈಕ್‌ನಲ್ಲಿ ಮುಸ್ಟೂರಿನತ್ತ ಕರೆದುಕೊಂಡು ಹೋಗುತ್ತಿದ್ದರು.

ಈ ವೇಳೆ, ಚಿಕ್ಕಬೆನಕಲ್ ಗ್ರಾಮದ ಬಳಿ ಲಾರಿಯನ್ನು ಓವರ್‌ಟೇಕ್ ಮಾಡುವಾಗ ಎದುರುಗಡೆಯಿಂದ ಬಂದ ಮತ್ತೊಂದು ಲಾರಿ ಬೈಕ್‌ಗೆ ಡಿಕ್ಕಿ ಹೊಡೆದು ಭಯಾನಕ ಅಪಘಾತ ಸಂಭವಿಸಿದೆ. ಪರಿಣಾಮ ಕವಿತಾ ಸ್ಥಳದಲ್ಲೇ ಮೃತಪಟ್ಟು, ಕರಿಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಕರಿಯಪ್ಪನ ಅಣ್ಣ ರಮೇಶ್ ಅವರಿಗೂ ಇದೇ ತಿಂಗಳಲ್ಲಿ ಮದುವೆ ನಿಶ್ಚಯವಾಗಿದ್ದು, ಇಬ್ಬರು ಸಹೋದರರೂ ಫೋಟೋಶೂಟ್‌ಗೆ ತೆರಳಿದ್ದರು. ಫೋಟೋಶೂಟ್ ಮುಗಿದ ನಂತರ ರಮೇಶ್ ಊರಿಗೆ ಹಿಂತಿರುಗಿದರೆ, ಕರಿಯಪ್ಪ ತನ್ನ ಭಾವಿ ಪತ್ನಿಯನ್ನು ಊರಿಗೆ ಬಿಟ್ಟು ಬರುವ ವೇಳೆ ಈ ದುರಂತವಾಗಿದೆ.

ಘಟನೆಯಿಂದ ಎರಡು ಕುಟುಂಬಗಳಲ್ಲಿ ತೀವ್ರ ಸಂತಾಪ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *