ಪುತ್ತೂರು: ಕ್ರಿಶ್ಚಿಯನ್ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಪುತ್ತೂರು ವಲಯದ ೧೨ ಚರ್ಚ್ಗಳ ಸಹಯೋಗದೊಂದಿಗೆ ಡಿ.೨೫ರಂದು ಕ್ರಿಸ್ಮಸ್ ಹಬ್ಬದ ಅಂಗವಾಗಿ ಭವ್ಯ ಮೆರವಣಿಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಸಮಿತಿಯ ಹಿರಿಯ ಸದಸ್ಯ ಮೌರಿಸ್ ಮಸ್ಕರೇನಸ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ ೪ ಗಂಟೆಗೆ ಪುತ್ತೂರು ದರ್ಬೆಯಲ್ಲಿ ಮೆರವಣಿಗೆ ಆರಂಭಗೊಳ್ಳಲಿದೆ. ಹಿರಿಯ ಸಿಪಿಐಎಂ ನಾಯಕ, ನ್ಯಾಯವಾದಿ ಪಿ.ಕೆ. ಸತೀಶನ್, ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಝೇವಿಯರ್ ಡಿಸೋಜ, ಪತ್ರಕರ್ತ ಸಂಶುದ್ದೀನ್ ಸಂಪ್ಯ ಚಾಲನೆ ನೀಡಲಿದ್ದಾರೆ.

ಮೆರವಣಿಗೆಯು ಮುಖ್ಯ ರಸ್ತೆಯಲ್ಲಿ ಕಲ್ಲಾರೆ ಮೂಲಕ ಸಾಗಿ ಬಸ್ ನಿಲ್ದಾಣ ಬಳಿಯ ಗಾಂಧಿ ಕಟ್ಟೆಯ ಎದುರು ಸಮಾಪನಗೊಳ್ಳಲಿದೆ. ಕಲ್ಲಡ್ಕ ಗೊಂಬೆಗಳು, ಡಿ.ಕೆ., ನಾಸಿಕ್ ಬ್ಯಾಂಡ್, ಸಾಂತಾಕ್ಲಾಸ್ ವೇಷಧಾರಿಗಳು, ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ. ಎಲ್ಲ ಜಾತಿ, ಧರ್ಮದ ಜನರಿಗೆ ಮರವಣಿಗೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಸಮುದಾಯ, ಸಂಘಟನೆಯವರು ತಮ್ಮ ಸ್ತಬ್ಧಚಿತ್ರಗಳ ಜತೆ ಭಾಗವಹಿಸಬಹುದು. ಆದರೆ ಈ ಬಗ್ಗೆ ಮುಂಚಿತವಾಗಿಯೇ ಸಮಿತಿಯಲ್ಲಿ ಹೆಸರು ನೋಂದಾಯಿಸಿಕೊAಡು ಅನುಮತಿ ಪಡೆದುಕೊಳ್ಳಬೇಕು ಎಂದವರು ನುಡಿದರು.

ಹಲವು ವರ್ಷಗಳ ಹಿಂದೆ ಪುತ್ತೂರಿನ ಡೋನ್ ಬೋಸ್ಕೋ ಕ್ಲಬ್, ಕ್ರಿಸ್ಟೋಫರ್ ಅಸೋಸಿಯೇಶನ್ ವತಿಯಿಂದ ಕ್ರಿಸ್ಮಸ್ ದಿನ ಮೆರವಣಿಗೆ ಆಯೋಜಿಸಲಾಗುತ್ತಿತ್ತು. ಬಳಿಕ ಕಾರಣಾಂತರಗಳಿAದ ಈ ಮೆರವಣಿಗೆ ಕಾರ್ಯಕ್ರಮ ನಿಂತು ಹೋಯಿತು. ಇದೀಗ ಮತ್ತೆ ಸಮುದಾಯದ ಯುವಕರು ಮೆರವಣಿಗೆ ನಡೆಸಲು ಒತ್ತಾಸೆ ತೋರಿದ ಕಾರಣ ಕಳೆದ ವರ್ಷ ಕ್ರಿಶ್ಚಿಯನ್ ಹಬ್ಬಗಳ ಆಚರಣಾ ಸಮಿತಿ ರಚಿಸಿಕೊಂಡು ಮೆರವಣಿಗೆ ಪುನರಾರಂಭಿಸಲಾಯಿತು. ಸೌಹಾರ್ದದ ಸಂಕೇತವಾಗಿ ಮತ್ತು ಕ್ರಿಸ್ಮಸ್ ಸಂಭ್ರಮದ ಸಂಕೇತವಾಗಿ ಮೆರವಣಿಗೆ ನಡೆಸಲಾಗುತ್ತಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಸೋನಾಲ್ ಲೋಬೋ, ರೋಶನ್ ಲಸ್ರಾದೋ, ವಿನ್ಸೆಂಟ್ ತಾವ್ರೋ, ವಿಲ್‌ರಾಯ್ ಡಿಸೋಜ ಸಿದ್ಯಾಳ ಮತ್ತು ಶಾನ್ ರೆಬೆಲ್ಲೋ ಬನ್ನೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *