ನಾವುಂದ ಬಳಿ ಕಾರು–ಕಂಟೈನರ್ ಡಿಕ್ಕಿ; ನಾಲ್ವರಿಗೆ ಗಾಯ, ಭಕ್ತಿಯಾತ್ರೆ ಶೋಕಯಾತ್ರೆಯಾಗಿ ಅಂತ್ಯ

ಉಡುಪಿ: ತಂದೆಯ ಆರೋಗ್ಯ ಸುಧಾರಿಸಲಿ ಎಂದು ಹರಕೆ ಹೊತ್ತು ದೇವಸ್ಥಾನಕ್ಕೆ ತೆರಳುತ್ತಿದ್ದ ಮಗಳ ಕನಸು ದುರಂತವಾಗಿ ಅಂತ್ಯಗೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಬಳಿ ಸಂಭವಿಸಿದೆ. ಕಾರು ಮತ್ತು ಕಂಟೈನರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಮಮತಾ ಹಾಗೂ ಆಕೆಯ ಮಗಳು ದ್ರಥಿಕ ಎಂದು ಗುರುತಿಸಲಾಗಿದೆ. ಇವರು ಕುಟುಂಬದ ಸದಸ್ಯರೊಂದಿಗೆ ಕಾರಿನಲ್ಲಿ ಮುರುಡೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ನಾವುಂದದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಚಾಲಕನ ನಿದ್ದೆ ಬಂಪರು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಅಪಘಾತದಲ್ಲಿ ರಾಘು (40), ಜಾಹ್ನವಿ (12), ಚಾರ್ವಿ (10) ಹಾಗೂ ಕಿರಣ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಮನಕಲುಕುವ ಹಿನ್ನೆಲೆ ಕೂಡ ಇದೆ. ಗಾಯಗೊಂಡಿರುವ ಕಿರಣ್ ಅವರ 10 ವರ್ಷದ ಪುತ್ರಿ ಚಾರ್ವಿ ತನ್ನ ತಂದೆಯ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದಳು. ಮಗಳ ಹರಕೆಯನ್ನು ತೀರಿಸಲು ಹಾಗೂ ದೇವರ ದರ್ಶನ ಪಡೆಯಲು ಕುಟುಂಬದವರು ದೇವಸ್ಥಾನ ಪ್ರವಾಸವನ್ನು ಹಮ್ಮಿಕೊಂಡಿದ್ದರು.
ಕುಟುಂಬವು ಮೊದಲು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು, ಬಳಿಕ ತ್ರಾಸಿ ಬೀಚ್‌ನಲ್ಲಿ ಸ್ವಲ್ಪ ಸಮಯ ಕಳೆಯಿತು. ನಂತರ ಮುರುಡೇಶ್ವರ ದೇವಸ್ಥಾನದತ್ತ ಪ್ರಯಾಣ ಬೆಳೆಸುವಾಗ ನಾವುಂದ ಬಳಿ ಕಾರು ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ.
ತಂದೆಯ ಜೀವ ಉಳಿಯಲಿ ಎಂದು ದೇವರಲ್ಲಿ ಹರಕೆ ಹೊತ್ತು ಹೊರಟಿದ್ದ ಮಗಳ ಕಣ್ಣೆದುರೇ ತಾಯಿ ಮತ್ತು ಅಕ್ಕ ಪ್ರಾಣ ಕಳೆದುಕೊಂಡಿರುವುದು ಎಲ್ಲರನ್ನೂ ಕಣ್ಣೀರಿನಲ್ಲಿ ಮುಳುಗಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You missed