ಉಡುಪಿ: ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ ಎಂದು ಮಣಿಪಾಲದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.




ಕ್ರೀಡೆಯಲ್ಲಿ ಜಯ ಗಳಿಸುವುದೇ ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವಾಗಿದೆ. ಆಸಕ್ತಿ, ಕಠಿನ ಪರಿಶ್ರಮ ಮತ್ತು ಆತ್ಮವಿಶ್ವಾಸ ಕ್ರೀಡಾಳುಗಳಲ್ಲಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯಶ್‍ಪಾಲ್ ಸುವರ್ಣ, ವಿಶೇಷ ಚೇತನ ಮಕ್ಕಳ, ವಿಶೇಷ ಸಾಮರ್ಥ್ಯವನ್ನು ಹೊರತರಲು ಇಂತಹ ಕಾರ್ಯಕ್ರಗಳ ಅಗತ್ಯತೆ ಇದೆ. ಸರ್ಕಾರಿ ಕಾಲೇಜು ಇಂತಹ ಅವಕಾಶವನ್ನು ಒದಗಿಸಿರುವುದು ಪ್ರಶಂಸನೀಯ ಎಂದರು.
ಭಾಗವಹಿಸಿದ ಎಲ್ಲಾ ಕ್ರೀಡಾಳುಗಳಿಗೆ ಮತ್ತು ತರಬೇತುದಾರರಿಗೆ ರಾಜ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಟಿ ಶರ್ಟ್ ಮತ್ತು ಕ್ಯಾಪ್ ವಿತರಿಸಲಾಯಿತು.
ರಾಜ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ, ಭಾರತೀಯ ವಿಶೇಷ ಚೇತನಾ ಫೆಡರೇಶನ್‍ನ ಕಾರ್ಯದರ್ಶಿ ಎಂ. ಆರ್. ಮಹೇಶ್ ಗೌಡ, ಎಲ್.ಐ.ಸಿ. ಸೀನಿಯರ್ ಡಿವಿಜನಲ್ ಮ್ಯನೇಜರ್ ಗಣಪತಿ ಎನ್. ಭಟ್, ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಗಣನಾಥ ಎಕ್ಕಾರು ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಿಕೇತನ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರು ಸೋಜನ್ ಕೆ.ಜಿ. ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ರಾಜೇಂದ್ರ ಕೆ. ನಿರೂಪಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಪಾಟ್ಕರ್ ವಂದಿಸಿದರು.



