ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯ ಮತ್ತು ಸಫಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ಪಶುವೈದ್ಯೆ ನೀರಾಣೆ ದಾಳಿಗೆ ಬಲಿಯಾದ ದುರ್ಘಟನೆ ನಡೆದಿದೆ. ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಮೃತರು.
ಡಾ. ಸಮೀಕ್ಷಾ ಅವರು ಮೃಗಾಲಯದಲ್ಲಿ ಪಶುವೈದ್ಯಾಧಿಕಾರಿಯಾಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಸಫಾರಿಯಲ್ಲಿರುವ ಪ್ರಾಣಿಯೊಂದರ ಚಿಕಿತ್ಸೆಗಾಗಿ ಮೃಗಾಲಯ ಆಸ್ಪತ್ರೆಗೆ ತೆರಳಿದ್ದರು.




ನಂತರ ರಾತ್ರಿ 11:45ರ ವೇಳೆಗೆ ಗರ್ಭಿಣಿ ನೀರಾಣೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮರಾ ಮೂಲಕ ಪರೀಕ್ಷಿಸಲು ಅದರ ಆವರಣದೊಳಗೆ ಪ್ರವೇಶಿಸಿದ ವೇಳೆ, ನೀರಾಣೆ ಏಕಾಏಕಿ ದಾಳಿ ನಡೆಸಿದೆ.
ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಸುಮಾರು 6:30ರ ವೇಳೆಗೆ ಅವರು ಮೃತಪಟ್ಟಿದ್ದಾರೆ.
ಈ ಘಟನೆ ಮೃಗಾಲಯದ ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ಸಿಬ್ಬಂದಿ ಸುರಕ್ಷತೆ ಕುರಿತ ಚರ್ಚೆಗೆ ಕಾರಣವಾಗಿದೆ.




