ಬೆಂಗಳೂರು: ಮಕ್ಕಳ ಆರೋಗ್ಯ ಹಾಗೂ ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ ಶಾಲಾ ಅವಧಿಯಲ್ಲಿ ಮಕ್ಕಳಿಗೆ ನಿಯಮಿತವಾಗಿ ನೀರು ಕುಡಿಯುವಂತೆ ಜ್ಞಾಪಿಸಲು ಎಲ್ಲ ಶಾಲೆಗಳಲ್ಲಿ ‘ನೀರಿನ ಘಂಟೆ’ ಬಾರಿಸುವುದನ್ನು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆಯ “ಪಿಎಂ ಘೋಷಣೆ ಶಕ್ತಿ ನಿರ್ಮಾಣ” ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.





ಮಕ್ಕಳು ಪ್ರತಿದಿನ ನಿಗದಿತ ಪ್ರಮಾಣದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಅಗತ್ಯವಾದರೂ, ಈ ಕುರಿತು ಅವರಿಗೆ ಸಾಕಷ್ಟು ಅರಿವು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ಅವಧಿಯಲ್ಲಿ ನಿಗದಿತ ಸಮಯಕ್ಕೆ ನೀರು ಕುಡಿಯುವಂತೆ ಮಕ್ಕಳಿಗೆ ನೆನಪಿಸುವುದು ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯ ಜವಾಬ್ದಾರಿಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮಕ್ಕಳಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು, ನೀರಿನಿಂದ ಹರಡುವ ಕಾಯಿಲೆಗಳಿಂದ ರಕ್ಷಿಸುವ ಸಲುವಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ಮಧ್ಯಾಹ್ನದ ಬಿಸಿ ಊಟದ ಸಮಯದಲ್ಲಿಯೂ ಹಾಗೂ ಆಟದ ಅವಧಿಯಲ್ಲಿಯೂ ಮಕ್ಕಳಿಗೆ ನೀರು ಸುಲಭವಾಗಿ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.


ಈ ನಿಯಮವು ಎಲ್‌ಕೆಜಿ, ಯುಕೆಜಿ ಸೇರಿ ಎಲ್ಲಾ ಹಂತದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ. ನೀರಿನ ಘಂಟೆ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಅಭ್ಯಾಸ ಬೆಳೆಸುವುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ.
ಶಿಕ್ಷಣ ಇಲಾಖೆ ಹೊರಡಿಸಿದ ಈ ಸುತ್ತೋಲೆ ಮಕ್ಕಳ ಆರೋಗ್ಯ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


