ಉಪ್ಪಿನಂಗಡಿ: ಹಗಲು ರೌಂಡ್ಸ್ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಉಪ್ಪಿನಂಗಡಿ ಪೊಲೀಸರು, ಆತನಿಂದ ಎಂ.ಡಿ.ಎಂ.ಎ. ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಫೆ. 10ರಂದು ಸಂಜೆ ಸುಮಾರು 6 ಗಂಟೆ ವೇಳೆಗೆ ಉಪ್ಪಿನಂಗಡಿ ಗ್ರಾಮದ ಪಂಜಳಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಯಹ್ಯಾ ಕೊಕ್ಕಡ (48) ಎಂಬಾತ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ವಿಚಾರಣೆ ಸಂದರ್ಭದಲ್ಲಿ ಆತನು ಮಾರಾಟ ಉದ್ದೇಶದಿಂದ ಎಂ.ಡಿ.ಎಂ.ಎ. ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.



ಪಂಚರ ಸಮ್ಮುಖದಲ್ಲಿ ನಡೆಸಿದ ಮಹಜರಿನಲ್ಲಿ ಆತನಿಂದ 2.16 ಗ್ರಾಂ ಎಂ.ಡಿ.ಎಂ.ಎ. (ಅಂದಾಜು ಮೌಲ್ಯ ರೂ. 3,000/-), ಒಂದು ಐಫೋನ್ (ರೂ. 45,000/-) ಹಾಗೂ ಒಂದು ಸ್ಯಾಮ್ಸಂಗ್ ಕೀ-ಪ್ಯಾಡ್ ಮೊಬೈಲ್ (ರೂ. 1,000/-) ಸೇರಿದಂತೆ ಒಟ್ಟು ರೂ. 49,000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 19/2026 ರಂತೆ ಕಲಂ 8(ಸಿ), 22(ಬಿ) ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






