ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟದಲ್ಲಿ 12 ಮಂದಿ ಸಾವಿಗೀಡಾದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತಷ್ಟು ತೀವ್ರಗೊಳಿಸಿದೆ. ಈ ಸಂಬಂಧ ಬಂಧಿತರಾದ ಶಂಕಿತ ಉಗ್ರರ ಹಣಕಾಸಿನ ವ್ಯವಹಾರಗಳಿಗೆ ಸಂಬಂಧ ಹೊಂದಿರುವ ಅಲ್–ಫಲಾಹ್ ವಿಶ್ವವಿದ್ಯಾಲಯ ಸೇರಿ ಒಟ್ಟು 25 ಸ್ಥಳಗಳಲ್ಲಿ ಮಂಗಳವಾರ ಇಡಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ.


ಹುಂಡಯ್ ಐ20 ಕಾರಿನ ಚಾಲಕನಾಗಿದ್ದ ಮತ್ತು ಸ್ಫೋಟದಲ್ಲಿ ಮೃತಪಟ್ಟ ಡಾ. ಉಮರ್ ಮೊಹಮ್ಮದ್ ಇದೇ ವಿಶ್ವವಿದ್ಯಾಲಯದಲ್ಲಿ ವೈದ್ಯರಾಗಿದ್ದುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಶಾಹಿನ್ ಸೈಯದ್, ಡಾ. ಅನಿಲ್ ರಥರ್ ಮತ್ತು ಡಾ. ಮುಜಮೆಲ್ ಶಕೀಲ್ ಇವರೂ ಕೂಡ ಅಲ್–ಫಲಾಹ್ ವಿವಿಯೊಂದಿಗಿನ ಸಂಬಂಧ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಸ್ಫೋಟಕ್ಕೆ ಸಂಬಂಧಿಸಿದಂತೆ ಉಗ್ರ ಸಂಪರ್ಕ ಹಾಗೂ ಹಣಕಾಸು ಲೆಕ್ಕಾಚಾರದ ತನಿಖೆಯನ್ನು ಇಡಿ ಮುಂದುವರೆಸಿದ್ದು, ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರ ಬೀಳುವ ಸಾಧ್ಯತೆ ಇದೆ.





