ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನ ಜನತೆಗೆ ಕಾಡಾನೆ ಹಾವಳಿಯಿಂದ ಪರಿಹಾರ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಭಾಗಕ್ಕೆ ಪ್ರತ್ಯೇಕ ಆನೆ ಕಾರ್ಯಪಡೆ ರಚನೆಗೆ ಅಂತಿಮ ಅನುಮೋದನೆ ನೀಡಿದೆ.




ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ದಾಳಿಯಿಂದ ಕೃಷಿ ಬೆಳೆಗಳಿಗೆ ಭಾರೀ ಹಾನಿಯಾಗುತ್ತಿದ್ದು, ಕೆಲವೊಮ್ಮೆ ಮಾನವ ಜೀವಹಾನಿಯೂ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆರ್ಥಿಕ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಕಡತಕ್ಕೆ ತಕ್ಷಣ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ಸರ್ಕಾರ ಇದೀಗ ಆನೆ ಕಾರ್ಯಪಡೆ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ.



ಕಾರ್ಯಪಡೆಯಲ್ಲಿ ಇರಲಿರುವ ಸೌಲಭ್ಯಗಳು
ಆನೆಗಳ ಚಲನವಲನವನ್ನು ಗಮನಿಸಿ ತಕ್ಷಣ ಸ್ಥಳಕ್ಕೆ ತೆರಳಲು ಮೂರು ಜೀಪುಗಳು ಮತ್ತು ಎರಡು ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಒದಗಿಸಲಾಗುತ್ತದೆ. ಆನೆಗಳನ್ನು ಕಾಡಿಗೆ ಅಟ್ಟಲು ಅಗತ್ಯವಿರುವ ವಾಕಿ-ಟಾಕಿ, ಗನ್ ಪಟಾಕಿ ಸೇರಿದಂತೆ ವಿವಿಧ ರಕ್ಷಣಾ ಪರಿಕರಗಳನ್ನು ಒದಗಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗದಂತೆ ತಡೆಯಲು ನಿರಂತರ ಗಸ್ತು ನಡೆಸಲಾಗುವುದು ಹಾಗೂ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡುವ ಜಾಗೃತಿ ಕಾರ್ಯವೂ ಕೈಗೊಳ್ಳಲಾಗುತ್ತದೆ. ಕಾರ್ಯಪಡೆಯ ಸಮನ್ವಯಕ್ಕಾಗಿ ವಿಶೇಷ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ) ಸ್ಥಾಪನೆ ಮಾಡಲಾಗಿದ್ದು, ಸಾರ್ವಜನಿಕರು ದೂರು ನೀಡಲು ಪ್ರತ್ಯೇಕ ಸಹಾಯವಾಣಿ ಸಂಖ್ಯೆಯನ್ನೂ ಬಿಡುಗಡೆ ಮಾಡಲಾಗುತ್ತದೆ.
ಇದಲ್ಲದೆ ಕಾಡಾನೆ ನಿಯಂತ್ರಣ ಕಾರ್ಯಾಚರಣೆ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸ್ ಇಲಾಖೆಯ ಸಹಾಯವನ್ನು ಪಡೆಯುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಶಾಸಕಿ ಭಾಗೀರಥಿ ಮುರುಳ್ಯ ಅವರ ಈ ಪ್ರಯತ್ನಕ್ಕೆ ಕ್ಷೇತ್ರದ ರೈತರು ಹಾಗೂ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

