ಯುವ ಸಮುದಾಯ ಮಾದಕ ದ್ರವ್ಯಗಳ ಬಲಿಯಾಗುತ್ತಿರುವುದು ಆತಂಕಕಾರಿ; ಅಪರಾಧಿಗಳಿಗೆ ಶಿಕ್ಷೆ ನೀಡಿದರೆ ಮಾತ್ರ ನಿಯಂತ್ರಣ ಸಾಧ್ಯ
ಪುತ್ತೂರು: ಮಾದಕ ದ್ರವ್ಯಗಳ ಬಳಕೆಯಿಂದ ಯುವ ಸಮುದಾಯ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿರುವುದು ಗಂಭೀರ ವಿಚಾರವಾಗಿದೆ ಎಂದು ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ ಡಿ. ಅಭಿಪ್ರಾಯಪಟ್ಟರು.
ಅವರು ಅಭಿಯೋಜನಾ ಇಲಾಖೆ ಮಂಗಳೂರು ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಹಭಾಗಿತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಹಮ್ಮಿಕೊಳ್ಳಲಾದ ಎನ್‌ಡಿಪಿಎಸ್ ಕಾಯಿದೆಯ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಎನ್‌ಡಿಪಿಎಸ್ ಪ್ರಕರಣಗಳ ತನಿಖೆಯಲ್ಲಿ ಹಲವು ಲೋಪಗಳು ಕಂಡು ಬರುತ್ತಿವೆ. ತನಿಖಾಧಿಕಾರಿಗಳು ಕಾಯಿದೆಯ ಸಂಪೂರ್ಣ ಅರಿವು ಹೊಂದಿದ್ದು, ಎಲ್ಲಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಆರೋಪಿಯನ್ನು ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದೂ ಸೇರಿದಂತೆ ಪ್ರಕ್ರಿಯೆಗಳು ಸರಿಯಾಗಿ ನಡೆಯಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಭಿಯೋಜನಾ ಇಲಾಖೆ ಮಂಗಳೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ. ಮಾತನಾಡಿ, ಅಪರಾಧಿಗಳಿಗೆ ನ್ಯಾಯಾಂಗದಿಂದ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹ ಕೃತ್ಯಗಳಿಗೆ ತಡೆಯೊಡ್ಡಬಹುದು ಎಂದರು. ಎನ್‌ಡಿಪಿಎಸ್ ಪ್ರಕರಣಗಳು ಕೆಲವು ಮಂದಿಗೆ ದಂಧೆ ಹಾಗೂ ಉದ್ಯೋಗವಾಗಿದ್ದು, ವಿಶೇಷವಾಗಿ ಮುಗ್ಧ ಯುವಕರು ಮತ್ತು ಮಕ್ಕಳು ಇದಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಎಂದು ಹೇಳಿದರು.
ಎನ್‌ಡಿಪಿಎಸ್ ಮತ್ತು ಐಪಿಸಿ ಕಾಯಿದೆಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅಗತ್ಯ. ಮಾಹಿತಿ ಸಿಕ್ಕ ಕ್ಷಣದಿಂದ ಚಾರ್ಜ್‌ಶೀಟ್ ಸಲ್ಲಿಸುವ ತನಕ ತನಿಖೆ ಸಮರ್ಪಕವಾಗಿರಬೇಕು. ಇಂತಹ ಪ್ರಕರಣಗಳ ಯಶಸ್ಸು ಅಥವಾ ವಿಫಲತೆ ತನಿಖಾಧಿಕಾರಿಯ ಕೈಯಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೋ) ಕುದ್ರಿಯ ಪುಷ್ಪರಾಜ ಅಡ್ಯಂತಾಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ. ಅವರನ್ನು ಸನ್ಮಾನಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಣ್ಣ ಎಚ್. ಆರ್., ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ವೈ.ಎಚ್., ಬಂಟ್ವಾಳ ಎಎಸ್ಪಿ ಯಶ್ ಕುಮಾರ್, ಸರಕಾರಿ ಅಭಿಯೋಜಕಿ ಜಯಂತಿ ಕೆ. ಭಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ, ಪುತ್ತೂರು ನಗರ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.








