ಪುತ್ತೂರು : 2 ರಿಂದ 6 ವರ್ಷದ ಮಕ್ಕಳಿಗೆ ಜಾಗತಿಕ ಮಟ್ಟದ ಪ್ರಾಥಮಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಭಾರತದ ಖ್ಯಾತ ಪ್ರಿಸ್ಕೂಲ್ ಸಂಸ್ಥೆ ‘ಯೂರೋಕಿಡ್ಸ್’ ಪುತ್ತೂರಿನ ದರ್ಬೆ ಪ್ರದೇಶದಲ್ಲಿರುವ ವಿಶಾಲಾ ಮಾರ್ಟ್ ಎದುರು ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅವರು ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು. ಕಕ್ಕಾಜೆ ಟ್ರಸ್ಟ್‌ನ ಸ್ಥಾಪಕ ಸುಧಾಮ ಕಕ್ಕಾಜೆ ಅವರು ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, “ಮಕ್ಕಳಿಗೆ ಆಟದ ಜೊತೆಗೆ ಶಿಕ್ಷಣವೂ ಅಗತ್ಯ. ಆ ರೀತಿಯ ಉತ್ತಮ ಶಿಕ್ಷಣ ವ್ಯವಸ್ಥೆ ಈಗ ಪುತ್ತೂರಿಗೂ ಬಂದಿದೆ. ಯೂರೋಕಿಡ್ಸ್ ಸಂಸ್ಥೆ ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ವಯಸ್ಸಿನ ಆಧಾರದ ಮೇಲೆ ಗುಣಮಟ್ಟದ ಶಿಕ್ಷಣ ನೀಡುತ್ತದೆ. ಇದು ಮಕ್ಕಳಿಗೆ ಆಟದ ಜೊತೆಗೆ ಕಲಿಕೆಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ,” ಎಂದರು. ಕಟ್ಟಡವನ್ನು ಒದಗಿಸಿದ ಉದ್ಯಮಿ ಮಂಜುನಾಥ್ ನಾಯಕ್ ಅವರು ಸಂಸ್ಥೆ ಕಾರ್ಯಾರಂಭದವರೆಗೆ ಬಾಡಿಗೆ ಪಡೆಯುವುದಿಲ್ಲ ಎಂದು ಘೋಷಿಸಿರುವುದು ಶ್ಲಾಘನೀಯ ಎಂದರು.
ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ಹೇಮನಾಥ ಶೆಟ್ಟಿ ಅವರು, “ಪುತ್ತೂರಿನ ಮಕ್ಕಳಿಗೆ ಒತ್ತಡವಿಲ್ಲದ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಆರಂಭವಾಗಿದೆ. ಈ ವಯಸ್ಸಿನ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದ್ದು, ಯೂರೋಕಿಡ್ಸ್ ಅದನ್ನು ಯಶಸ್ವಿಯಾಗಿ ನಿಭಾಯಿಸಲಿದೆ,” ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ಮಹೇಶ್ ಕಜೆ ಅವರು, “ಮಕ್ಕಳಿಗೆ ಕಪಟವಿಲ್ಲದ ಶುದ್ಧ ವಾತಾವರಣದಲ್ಲಿ ಶಿಕ್ಷಣ ಸಿಗಬೇಕು. ಅಂತಹ ವಾತಾವರಣವನ್ನು ಯೂರೋಕಿಡ್ಸ್ ಒದಗಿಸಲಿದೆ. ಇಲ್ಲಿನ ಮಕ್ಕಳು ಭವಿಷ್ಯದಲ್ಲಿ ನಾಯಕರು, ಮೇಧಾವಿಗಳಾಗಿ ಬೆಳೆಯಲಿ,” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಕ್ಕಾಜೆ ಟ್ರಸ್ಟ್‌ನ ಸದಸ್ಯ ಜಯರಾಮ್, ಟ್ರಸ್ಟಿ ಮಂಜು ಗೋಪಿನಾಥ್, ಪಾರೂಕ್ ಬಾಯಬ್ಬೆ, ಮಂಜುನಾಥ್ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಪುಟಾಣಿಗಳು ಮತ್ತು ಟ್ರಸ್ಟ್ ಸದಸ್ಯರು ಅತಿಥಿಗಳನ್ನು ಗೌರವಿಸಿದರು.

Leave a Reply

Your email address will not be published. Required fields are marked *