ಪುತ್ತೂರು: ದೇವಾಲಯ ಎಂದರೆ ಅದು ಎಲ್ಲರದ್ದಾಗಿದ್ದು, ಅದರ ಲೆಕ್ಕಾಚಾರ, ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹಾಗೂ ಜವಾಬ್ದಾರಿ ಪ್ರತಿಯೊಬ್ಬ ಭಕ್ತನಿಗೂ ಇದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.

ಮಂಗಳವಾರ ದೇವಾಲಯದ ಸಭಾಂಗಣದಲ್ಲಿ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಏಪ್ರಿಲ್ 1ರಂದು ಗೊನೆ ಮುಹೂರ್ತದೊಂದಿಗೆ ಆರಂಭವಾಗಿ ಏಪ್ರಿಲ್ 10ರಿಂದ 20ರವರೆಗೆ ನಡೆಯುವ ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೆಯನ್ನು ಯಶಸ್ವಿಯಾಗಿ, ವಿಜೃಂಭಣೆಯಿಂದ ನಡೆಸಲು ಭಕ್ತರ ಸಹಕಾರ ಅಗತ್ಯವಿದೆ ಎಂದರು. ಸಭೆಯಲ್ಲಿ ಭಕ್ತರಿಂದ ವಿವಿಧ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

ಸಭೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪ್ರಮುಖವಾಗಿ ಚರ್ಚೆಯಾಯಿತು. ವೀರಮಂಗಲ ಕಟ್ಟೆ ಬಳಿ ವಾಹನ ನಿಲುಗಡೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಪರ್ಯಾಯ ವ್ಯವಸ್ಥೆ ರೂಪಿಸುವ ಬಗ್ಗೆ ಸೂಚನೆ ನೀಡಲಾಯಿತು. ಖಾಲಿ ಜಾಗಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜೊತೆಗೆ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.
ಜಾತ್ರೆ ಸಂದರ್ಭದಲ್ಲಿ ಪೂಜೆ ಸ್ವೀಕರಿಸುವ ಕಟ್ಟೆಗಳ ಬಳಿ ಸುರಕ್ಷತೆ ಕೊರತೆ, ಅಶುಚಿತ್ವ ಮತ್ತು ಅಸಭ್ಯ ಚಟುವಟಿಕೆಗಳ ಬಗ್ಗೆ ಭಕ್ತರು ಆತಂಕ ವ್ಯಕ್ತಪಡಿಸಿದರು. ಕಟ್ಟೆ ಪ್ರದೇಶಗಳನ್ನು ಬೇಲಿ ಹಾಕಿ ಸುರಕ್ಷಿತಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜನಸಂದಣಿ ಹೆಚ್ಚಾಗುವ ಪೇಟೆ ಸವಾರಿ ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇರಬೇಕು, ಆಹಾರ ವಸ್ತುಗಳ ಗುಣಮಟ್ಟ ಪರಿಶೀಲನೆ ನಡೆಯಬೇಕು ಎಂಬ ಸಲಹೆಗಳು ಕೇಳಿಬಂದವು. ಸಂಚಾರ ದಟ್ಟಣೆ ನಿಯಂತ್ರಣ ಮತ್ತು ರಥೋತ್ಸವವನ್ನು ಸಮಯಕ್ಕೆ ಸರಿಯಾಗಿ ಮುಗಿಸುವ ಬಗ್ಗೆ ವಿಶೇಷ ಗಮನ ಹರಿಸುವಂತೆ ಸೂಚಿಸಲಾಯಿತು.

ಜಾತ್ರೆಯಲ್ಲಿ ಸಂತೆ ವ್ಯಾಪಾರ, ಸ್ವಚ್ಛತೆ, ಉಚಿತ ಬಸ್ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯಗಳು ಹಾಗೂ ಸ್ವಯಂಸೇವಕರ ನೋಂದಣಿ ಕುರಿತಂತೆ ಹಲವು ಸಲಹೆಗಳು ವ್ಯಕ್ತವಾದವು. ವಿಶೇಷವಾಗಿ ಹೆಚ್ಚು ಭಕ್ತರು ಆಗಮಿಸುವ ದಿನಗಳಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಒತ್ತಾಯಿಸಲಾಯಿತು.
ಇದೇ ವೇಳೆ, ಜಾತ್ರಾ ಗದ್ದೆಯ ಮಳಿಗೆಗಳ ಏಲಂ ಪ್ರಕ್ರಿಯೆ, ಮ್ಯೂಸಿಯಂಗೆ ನೀಡಿರುವ ಬಾಡಿಗೆ ಹಾಗೂ ಟೆಂಡರ್ ಪ್ರಕ್ರಿಯೆ ಕುರಿತಂತೆ ಕೆಲವು ಭಕ್ತರು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಸ್ಪಷ್ಟನೆ ನೀಡಿದ ಅಧ್ಯಕ್ಷರು, ಭಕ್ತರ ಅಭಿಪ್ರಾಯಗಳನ್ನು ಪರಿಗಣಿಸಿ ಅಗತ್ಯವಿದ್ದರೆ ಮರು ಏಲಂ ನಡೆಸಲಾಗುವುದು ಎಂದರು.
ಪ್ರತ್ಯೇಕ ಊಟದ ವ್ಯವಸ್ಥೆ ಕುರಿತಾಗಿ ಕೂಡ ಪ್ರಶ್ನೆಗಳು ಕೇಳಿಬಂದಿದ್ದು, ಸಮಾನತೆಗೆ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *