ತಿರುಪತಿ  :ವಿಶ್ವಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ಕೆಲ ತಿಂಗಳ ಹಿಂದೆ ಹುಟ್ಟಿಕೊಂಡಿದ್ದ ಲಡ್ಡು ವಿವಾದವು ಭಕ್ತಾದಿಗಳನ್ನು ಬೆಚ್ಚಿಬೀಳಿಸಿತ್ತು. ಈ ಲಡ್ಡು ತಯಾರಿಕೆಗೆ ಕಲಬೆರಕೆ ವಸ್ತುಗಳನ್ನು ಬಳಸುತ್ತಿದ್ದ ಆರೋಪವೂ ಕೇಳಿಬಂದಿತ್ತು. ಇದೀಗ ಟಿಟಿಡಿ ಲಡ್ಡು ತುಪ್ಪ ಕಲಬೆರಕೆ ಪ್ರಕರಣದಲ್ಲಿ ದೆಹಲಿ ಮೂಲದ ವ್ಯಾಪಾರಿ ಅಜಯ್ ಕುಮಾರ್ ಸುಗಂಧ ಅವರನ್ನು ಎಸ್‌ಐಟಿ ಬಂಧಿಸಿದೆ.

ನಕಲಿ ತುಪ್ಪಕ್ಕೆ ಬಳಸುವ ರಾಸಾಯನಿಕಗಳನ್ನು ಪೂರೈಕೆ ಮಾಡಿರುವ ಆರೋಪ ಕೇಳಿಬಂದಿದೆ. ಅವರು ಭೋಲೆ ಬಾಬಾ ಡೈರಿ ನಿರ್ದೇಶಕರೊಂದಿಗೆ ವರ್ಷಗಳ ಕಾಲ ಕೆಲಸ ಮಾಡಿದ್ದು, ಖಾಸಗಿ ಡೈರಿ ಲೇಬಲ್‌ಗಳ ಅಡಿಯಲ್ಲಿ ತುಪ್ಪವನ್ನು ಟಿಟಿಡಿಗೆ ಪೂರೈಸಿರುವುದು ಬೆಳಕಿಗೆ ಬಂದಿದೆ.

ಕಳೆದ ವರ್ಷ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಹಿಂದಿನ ಆಡಳಿತದಲ್ಲಿ ಟಿಟಿಡಿ ಲಡ್ಡುಗಳನ್ನು ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಲಾಗಿತ್ತು ಎಂದು ಆರೋಪಿಸಿದ್ದರು. ಇದು ದೊಡ್ಡ ವಿವಾದವಾಗಿತ್ತು. ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಸ್‌ಐಟಿಯನ್ನು ರಚಿಸಲಾಯಿತು. ಟಿಟಿಡಿ ಬಳಸುವ ತುಪ್ಪದ ಖರೀದಿ ದಾಖಲೆಗಳು, ಪೂರೈಕೆ ಸರಪಳಿಗಳು ಮತ್ತು ಗುಣಮಟ್ಟ-ಪರೀಕ್ಷಾ ವಿಧಾನಗಳನ್ನು ಪರಿಶೀಲಿಸಲು ಪ್ರಾರಂಭಿಸಲಾಗಿತ್ತು.

5 ವರ್ಷಗಳಿಗೂ ಹೆಚ್ಚು ಕಾಲ ಪೂರೈಕೆ

ಟಿಟಿಡಿ ತುಪ್ಪ ಹಗರಣ ಬಯಲಾಗಿದೆ. ವೆಂಕಟೇಶ್ವರ ದೇವಸ್ಥಾನಕ್ಕೆ ₹250 ಕೋಟಿ ನಕಲಿ ಪೂರೈಕೆಯಾಗಿದೆ. ಟಿಟಿಡಿ 5 ವರ್ಷಗಳಿಗೂ ಹೆಚ್ಚು ಕಾಲ ಕಲಬೆರಕೆ ತುಪ್ಪವನ್ನು ಸ್ವೀಕರಿಸಿರುವುದನ್ನು ಸಿಬಿಐನ ಎಸ್‌ಐಟಿ ಪತ್ತೆ ಹಚ್ಚಿದೆ. ಭೋಲೆ ಬಾಬಾ ಡೈರಿ ಒಂದು ಹನಿ ಹಾಲು ಅಥವಾ ಬೆಣ್ಣೆಯನ್ನು ಸಂಗ್ರಹಿಸದೆ ₹250 ಕೋಟಿ ಮೌಲ್ಯದ 68 ಲಕ್ಷ ಕೆಜಿ ನಕಲಿ ತುಪ್ಪವನ್ನು ಪೂರೈಸಿದೆ. ಬಳಸಿದ ಪಾಮ್ ಎಣ್ಣೆ, ಕರ್ನಲ್ ಎಣ್ಣೆ ಮತ್ತು ಅಸಿಟಿಕ್ ಆಸಿಡ್ ಎಸ್ಟರ್‌ನಂತಹ ರಾಸಾಯನಿಕಗಳು ನಕಲಿ ಗುಣಮಟ್ಟದ್ದು ಎನ್ನಲಾಗಿದೆ. 2022ರಲ್ಲಿ ಕಪ್ಪುಪಟ್ಟಿಗೆ ಸೇರಿಸಿದ ನಂತರವೂ ನಿರಂತರ ಸರಬರಾಜು ನಡೆದಿದ್ದು, ಭಾರತದ ಅತ್ಯಂತ ಪವಿತ್ರ ದೇವಾಲಯದಲ್ಲಿ ನೀಡಲಾಗುವ ನೈವೇದ್ಯಗಳಲ್ಲಿ ಶುದ್ಧತೆ ರಾಜಿ ಮಾಡಿಕೊಂಡ ಹಗರಣ ನಡೆದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಸದ್ಯ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಲಡ್ಡು ತುಪ್ಪ ಕಲಬೆರಕೆ ಪ್ರಕರಣದ ತನಿಖೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದೆ. ದೆಹಲಿ ಮೂಲದ ರಾಸಾಯನಿಕ ವ್ಯಾಪಾರಿ ಅಜಯ್ ಕುಮಾರ್ ಸುಗಂಧ ಅವರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಎ-16 ಎಂದು ಹೆಸರಿಸಿದೆ. ಭೋಲೆಬಾಬಾ ಡೈರಿ ನೆಟ್‌ವರ್ಕ್‌ಗೆ ಸಂಬಂಧಿಸಿದ ಕಲಬೆರಕೆ ತುಪ್ಪವನ್ನು ತಯಾರಿಸಲು ಬಳಸುವ ರಾಸಾಯನಿಕಗಳನ್ನು ಪೂರೈಸಿದ ಆರೋಪ ಅವರ ಇವರ ಮೇಲಿದೆ.

ಅಲ್ಲದೆ ದೆಹಲಿಯ ಪ್ರಮುಖ ವಿತರಕರೊಬ್ಬರು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡ ರಾಸಾಯನಿಕಗಳನ್ನು ಅಜಯ್ ಕುಮಾರ್ ತಮ್ಮ ಕಂಪನಿಯ ಹೆಸರಿನಲ್ಲಿ ಖರೀದಿಸಿ ಡೈರಿಗೆ ಪೂರೈಸಿದ್ದಾರೆ ಎಂದು ಎಸ್‌ಐಟಿ ಪತ್ತೆ ಹಚ್ಚಿದೆ. ಈ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ವಿವಿಧ ಬ್ರ್ಯಾಂಡ್‌ ಹೆಸರುಗಳಲ್ಲಿ ಪೂರೈಸಲಾಗುತ್ತಿತ್ತು. ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದ ಶೇಕಡಾ 90ಕ್ಕಿಂತ ಹೆಚ್ಚು ಪಾಮ್ ಎಣ್ಣೆಯೊಂದಿಗೆ ಕಲಬೆರಕೆ ಮಾಡಲಾಗಿದೆ ಎಂದೂ ಎಸ್‌ಐಟಿ ಕಂಡುಹಿಡಿದಿದೆ.

ಭೋಲೆಬಾಬಾ ಡೈರಿ ನಿರ್ದೇಶಕರೊಂದಿಗೆ ಅಜಯ್ ಕುಮಾರ್ ಅವರ ಸಂಬಂಧ ಹೊಂದಿರುವ ರಾಸಾಯನಿಕ ಪೂರೈಕೆ ಮತ್ತು ಹಣಕಾಸು ವಹಿವಾಟುಗಳ ಪುರಾವೆಗಳನ್ನು ಸಂಗ್ರಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ನಂತರ ಅವರನ್ನು ತಿರುಪತಿಯ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗಾಗಿ ಕರೆತರಲಾಯಿತು. ನೆಲ್ಲೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನವೆಂಬರ್‌ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *