ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ ರೀಲ್ಸ್ಗಳಲ್ಲಿ ಕೈಯಲ್ಲಿ ಟೀ ಕಪ್ ಹಿಡಿದು ನಗುವ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಸರಳ ನಗು ಇದೀಗ ಕೋಟ್ಯಾಂತರ ಜನರ ಗಮನ ಸೆಳೆದಿದ್ದು, “ಈ ಹುಡುಗ ಯಾರು? ಎಲ್ಲಿಯವನು?” ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಆ ಕುತೂಹಲಕ್ಕೆ ಇಲ್ಲಿದೆ ಉತ್ತರ.




ಈ ವೈರಲ್ ಹುಡುಗನ ಹೆಸರು ಅರುಣ್. ಆತ ದಕ್ಷಿಣ ಭಾರತದ ತೆಲಂಗಾಣ ರಾಜ್ಯದ ಜಯಶಂಕರ್ ಬೊಪ್ಪಲಪಲ್ಲಿ ಜಿಲ್ಲೆಯ ನಾಲಪು ಚಟುಪಲ್ಲಿ ಎಂಬ ಹಳ್ಳಿಯ ನಿವಾಸಿ. ಅರುಣ್ ವೃತ್ತಿಯಲ್ಲಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಸರಳ ಜೀವನ ಶೈಲಿಯಿಂದಲೇ ಜನಮನ ಗೆದ್ದಿದ್ದಾನೆ.
ವಿಡಿಯೋ ವೈರಲ್ ಆಗಲು ಕಾರಣವಾದ ಘಟನೆ ಏನೆಂದರೆ, ಅರುಣ್ ಕೆಲಸ ಮಾಡುತ್ತಿದ್ದ ಲಾರಿಯ ಚಾಲಕ ನೆಹರು (ಅರುಣ್ ಪ್ರೀತಿಯಿಂದ ‘ಬಾವ’ ಎಂದು ಕರೆಯುವವರು) ಚಹಾ ಕುಡಿಯುವ ವೇಳೆ ಹೇಳಿದ ಸಣ್ಣ ಜೋಕ್ಗೆ ಅರುಣ್ ನಕ್ಕ ಕ್ಷಣವನ್ನು ಆಕಸ್ಮಿಕವಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಷ್ಟೇ ಸಾಕು – ಆ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಯಿತು.





ಅರುಣ್ ಅತ್ಯಂತ ಬಡ ಕುಟುಂಬ ಹಿನ್ನೆಲೆಯಿಂದ ಬಂದವನು. ಬಡತನದ ಕಾರಣ ನಾಲ್ಕನೇ ತರಗತಿಯಲ್ಲೇ ಶಾಲೆ ಬಿಟ್ಟಿದ್ದನು. ಆದರೆ ಲಾರಿ ಚಾಲಕ ನೆಹರು ಅವರ ಪ್ರೋತ್ಸಾಹದಿಂದ ಇತ್ತೀಚೆಗೆ 10ನೇ ತರಗತಿ ಪರೀಕ್ಷೆ ಬರೆದು ಯಶಸ್ವಿಯಾಗಿ ಪಾಸಾಗಿದ್ದಾನೆ. ಈಗ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಾ, ಲಾರಿ ಚಾಲನೆಯನ್ನೂ ಕಲಿಯುತ್ತಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಅಪ್ಲೋಡ್ ಆದ ಒಂದೂವರೆ ತಿಂಗಳಲ್ಲೇ ಸುಮಾರು 40 ಮಿಲಿಯನ್ಗಿಂತ ಅಧಿಕ ವೀಕ್ಷಣೆಗಳು ದೊರೆತಿವೆ. ಇಂದಿನ ದಿನಗಳಲ್ಲಿ ಯಾವುದೇ ಮೀಮ್ ಅಥವಾ ಟ್ರೋಲ್ ವಿಡಿಯೋ ಈತನ ಮುಖವಿಲ್ಲದೆ ಪೂರ್ಣವಾಗುವುದಿಲ್ಲ ಎನ್ನುವಷ್ಟು ಅರುಣ್ ಫೇಮಸ್ ಆಗಿದ್ದಾನೆ.
ಒಟ್ಟಾರೆಯಾಗಿ, ಸಾಮಾನ್ಯ ಲಾರಿ ಕಾರ್ಮಿಕನೊಬ್ಬ ತನ್ನ ಸರಳ ನಗುವಿನಿಂದಲೇ ದೇಶಾದ್ಯಂತ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
