ಕಡಬ ತಾಲೂಕು ಕೌಕ್ರಾಡಿ ಗ್ರಾಮದ 123ನೇ ಸರ್ವೇ ನಂಬರ್‌ಗೆ ಸಂಬಂಧಿಸಿದ ಕೃಷಿ ಭೂಮಿಯ ಪ್ಲಾಟಿಂಗ್ ಹಾಗೂ ಪಹಣಿ ಪತ್ರ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೀವ್ರ ವಿಳಂಬವಾಗಿರುವುದನ್ನು ಖಂಡಿಸಿ, ನೂರಕ್ಕೂ ಅಧಿಕ ಫಲಾನುಭವಿ ರೈತರು ಮಂಗಳವಾರ ಕಡಬ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೌಕ್ರಾಡಿ ಗ್ರಾಮದ 123 ಸರ್ವೇ ನಂಬರ್ ವ್ಯಾಪ್ತಿಯ 3634.70 ಎಕರೆ ವಿಸ್ತೀರ್ಣದ ಕೃಷಿ ಭೂಮಿಗೆ ಸಂಬಂಧಿಸಿದಂತೆ ಪುತ್ತೂರು ಸಹಾಯಕ ಆಯುಕ್ತರ ಆದೇಶದ ಮೇರೆಗೆ ಕಡತಗಳನ್ನು ಕಡಬ ತಹಶೀಲ್ದಾರರ ಕಚೇರಿಗೆ ರವಾನಿಸಲಾಗಿತ್ತು. ಆದೇಶಾನುಸಾರ ಕಂದಾಯ ಮತ್ತು ಅರಣ್ಯ ಭೂಮಿಯನ್ನು ಪ್ರತ್ಯೇಕಿಸಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಆರ್‌ಟಿಸಿ ತಯಾರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಉಳಿದ ಪ್ಲಾಟಿಂಗ್ ಹಾಗೂ ಪಹಣಿ ಪತ್ರ ಸಿದ್ಧಪಡಿಸುವ ಮುಂದಿನ ಹಂತದ ಕಡತಗಳನ್ನು ಕಳೆದ ನಾಲ್ಕು ತಿಂಗಳಿನಿಂದ ಉಪತಹಶೀಲ್ದಾರರು ತಮ್ಮ ಲಾಗಿನ್‌ನಲ್ಲೇ ಇಟ್ಟುಕೊಂಡು ಯಾವುದೇ ಪ್ರಗತಿ ಸಾಧಿಸದೇ ವಿಳಂಬ ಧೋರಣೆ ತೋರಿದ್ದಾರೆ ಎಂದು ಫಲಾನುಭವಿ ರೈತರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ರೈತರು ತಹಶೀಲ್ದಾರ್ ಹಾಗೂ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಮುಂದೆ ತಮ್ಮ ಅಳಲನ್ನು ವ್ಯಕ್ತಪಡಿಸಿದರು. ಕಡತ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರಿರುವ ಉಪತಹಶೀಲ್ದಾರರನ್ನು ತಕ್ಷಣ ಕಾರ್ಯದಿಂದ ವಿಮುಕ್ತಗೊಳಿಸಿ, ಬೇರೆಯ ಅಧಿಕಾರಿಗೆ ಜವಾಬ್ದಾರಿ ವಹಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು.
ರೈತರ ತೀವ್ರ ಒತ್ತಾಯಕ್ಕೆ ಸ್ಪಂದಿಸಿದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು, ಕಡತ ವಿಲೇವಾರಿಯಲ್ಲಿ ವಿಳಂಬಕ್ಕೆ ಕಾರಣರಾದ ಉಪತಹಶೀಲ್ದಾರರನ್ನು ತಕ್ಷಣದಿಂದ ಆ ಕಾರ್ಯದಿಂದ ಬಿಡುಗಡೆಗೊಳಿಸಿ, ಬೇರೆಯ ಅಧಿಕಾರಿಗೆ ಜವಾಬ್ದಾರಿ ಹಸ್ತಾಂತರಿಸುವುದಾಗಿ ಭರವಸೆ ನೀಡಿದರು. ಈ ಭರವಸೆಯ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದು ತೆರಳಿದರು.
ಪ್ರತಿಭಟನೆ ವೇಳೆ ಉಪತಹಶೀಲ್ದಾರರಾದ ಶಾಯದುಲ್ಲಾ ಖಾನ್, ಗೋಪಾಲ ಕೆ., ಸರ್ವೆ ಇಲಾಖೆ ಅಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಲಕೃಷ್ಣ ಬಾಣಜಾಲು, ಕೌಕ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ., ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್, ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್, ಜನಾರ್ದನ, ಭವಾನಿ ಸೇರಿದಂತೆ ತುಕ್ರಪ್ಪ ಶೆಟ್ಟಿ ನೂಜೆ, ಮಹೇಶ್, ನಾರಾಯಣ ಗೌಡ, ಗೋಪಾಲ ಗೌಡ, ಜಾನ್ಸನ್ ಗಲ್ಬಾವು ಮೊದಲಾದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *