ಪೆರ್ಲ: ಪೆರ್ಲ ಸಮೀಪದ ಬೆದ್ರಾಂಪಳ್ಳದ ನಡುಬೈಲು ಪ್ರದೇಶದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆೊಂದು ಸಂಪೂರ್ಣವಾಗಿ ಉರಿದು ಭಸ್ಮವಾದ ದುರ್ಘಟನೆ ಬುಧವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ನಡೆದಿದೆ.

ಈ ಮನೆ ರಮೇಶ್ ಚಂದ್ರ ರೈ ಅವರಿಗೆ ಸೇರಿದ್ದು, ಸಂಕ್ರಾಂತಿ ಹಬ್ಬದ ಹಿನ್ನೆಲೆ ತರವಾಡು ಸಂಬಂಧ ಕಾರ್ಯಕ್ಕಾಗಿ ಪೆರುವಾಯಿ ದೇವಸ್ಥಾನಕ್ಕೆ ತೆರಳಿದ್ದರೆಂದು ತಿಳಿದು ಬಂದಿದೆ. ಈ ವೇಳೆ ಪತ್ನಿ ಕೆಲಸಕ್ಕೆ ಹೋಗಿದ್ದು, ಮಕ್ಕಳು ಶಾಲೆಗೆ ತೆರಳಿದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ. ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡ ವಿಚಾರ ತಡವಾಗಿ ಗಮನಕ್ಕೆ ಬಂದಿದೆ.
ಮನೆಯೊಳಗೆ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಅವಘಡ ಉಂಟಾಗಿದೆ ಎಂದು ಶಂಕಿಸಲಾಗಿದೆ. ಬೆಂಕಿ ಸಂಪೂರ್ಣವಾಗಿ ಹತ್ತಿಕೊಂಡ ಬಳಿಕ ಸ್ಥಳೀಯರು ವಿಷಯವನ್ನು ಗಮನಿಸಿ ತಕ್ಷಣ ಕಾಸರಗೋಡಿನಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿದರು.

ಆದರೆ ಅಷ್ಟರೊಳಗೆ ಮನೆಯೊಳಗೆ ಇದ್ದ ಬೆಲೆಬಾಳುವ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು, ಬಟ್ಟೆಬರೆಗಳು ಸೇರಿದಂತೆ ಎಲ್ಲವೂ ಬೆಂಕಿಗಾಹುತಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಘಟನೆಯಿಂದ ಕುಟುಂಬವು ಸಂಕಷ್ಟಕ್ಕೆ ಸಿಲುಕಿದ್ದು, ಸ್ಥಳೀಯರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *