ಬೆಂಗಳೂರು: ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಗರದಲ್ಲಿ ಆತಂಕಕ್ಕೆ ಕಾರಣವಾಯಿತು. ಆದರೆ ಸ್ಥಳೀಯರ ಸಕಾಲಿಕ ಕ್ರಮದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸದೆ ಭಾರೀ ಅನಾಹುತ ತಪ್ಪಿದೆ.

ಚಿಕ್ಕಪೇಟೆಯ ಬಳೇಪೇಟೆಯಲ್ಲಿ ದೇವಸ್ಥಾನದ ಮುಂದೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ದೇವಾಲಯದ ಮುಂಭಾಗವನ್ನು ಹುಲ್ಲು, ಹೂವುಗಳು ಮತ್ತು ಬ್ಯಾನರ್‌ಗಳಿಂದ ಆಕರ್ಷಕವಾಗಿ ಸಿಂಗಾರಿಸಲಾಗಿತ್ತು. ರಾತ್ರಿ ಸುಮಾರು 7 ಗಂಟೆ ವೇಳೆಗೆ ಪಟಾಕಿ ಹಚ್ಚುವಾಗ ಆಕಸ್ಮಿಕವಾಗಿ ಅದರ ಬೆಂಕಿ ಕಿಡಿ ಸಿಂಗಾರಗೊಂಡಿದ್ದ ತೋರಣಕ್ಕೆ ತಾಕಿ ಬೆಂಕಿ ಹೊತ್ತಿಕೊಂಡಿದೆ.

ದೇವಾಲಯದ ಮುಂದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಬ್ಯಾನರ್ ಕೂಡ ಅಳವಡಿಸಲಾಗಿತ್ತು. ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಹಾಗೂ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದರೂ, ಸ್ಥಳೀಯರ ತಕ್ಷಣದ ಸ್ಪಂದನೆಯಿಂದಾಗಿ ಬೆಂಕಿ ವ್ಯಾಪಕವಾಗಿ ಹರಡುವುದನ್ನು ತಡೆಯಲು ಸಾಧ್ಯವಾಯಿತು.
ಈ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *