ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿಯಲ್ಲಿ ಶನಿವಾರ ಮಧ್ಯಾಹ್ನ ನಡೆದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡದಲ್ಲಿ ಮನೆ ಬೆಂಕಿಗಾಹುತಿಗೆ ಗುರಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಮಾದೇರಿ ನಿವಾಸಿ ಕೆ.ವಿ. ಜೋಸೆಫ್ ಅವರ ಪುತ್ರ ಹಾಗೂ ಅಧ್ಯಾಪಕರಾದ ಜೋಸ್ ಪ್ರಕಾಶ್ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿತ್ತು. ಬೆಂಕಿ ಚಿಮ್ಮಿದ ಪರಿಣಾಮ ಮನೆಯ ವಿದ್ಯುತ್ ಉಪಕರಣಗಳು, ಹಾಗೂ ಹೊರಭಾಗದಲ್ಲಿ ನಿಲ್ಲಿಸಿದ್ದ ಹೊಸ ಸ್ಕೂಟರ್ ಸೇರಿ ಅನೇಕ ಗೃಹೋಪಕರಣಗಳು ಸಂಪೂರ್ಣವಾಗಿ ನಾಶವಾಗಿವೆ.

ಅಪಘಾತದಲ್ಲಿ ಸುಮಾರು ₹4 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇರದ ಕಾರಣ ಪ್ರಾಣಾಪಾಯ ತಪ್ಪಿದೆ. ಅಕ್ಕಪಕ್ಕದವರು ತಕ್ಷಣವೇ ಬೆಂಕಿಯನ್ನು ಆರಿಸುವಲ್ಲಿ ಮುಂದಾಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಘಟನಾ ಸ್ಥಳಕ್ಕೆ ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ವರ್ಗಿಸ್ ಕೈಪನಡ್ಕ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ಪಂಚಾಯತ್ ಸಿಬ್ಬಂದಿ ಪ್ರಸಾದ್, ಫಾ. ಶಾಜಿ ಮತ್ತಿತರರು ಭೇಟಿ ನೀಡಿ ಕುಟುಂಬದವರನ್ನು ಧೈರ್ಯ ತುಂಬಿದರು.

ಅಪಘಾತ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ…

Leave a Reply

Your email address will not be published. Required fields are marked *