ಪುತ್ತೂರು: ಮೂರು ವರ್ಷಗಳ ಹಿಂದೆ ನೆಲ್ಯಾಡಿಯಲ್ಲಿ ಬೆಳಕಿಗೆ ಬಂದಿದ್ದ ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಬನ್ನೂರಿನ ಆನೆಮಜಲಿನಲ್ಲಿ ನೂತನವಾಗಿ ಉದ್ಘಾಟನೆಯಾದ ನ್ಯಾಯಾಲಯ ಸಂಕೀರ್ಣದಲ್ಲಿ ಪ್ರಕಟವಾದ ಇದು ಪ್ರಥಮ ತೀರ್ಪಾಗಿದೆ.





2022ರ ಜೂನ್ 1ರಂದು ನೆಲ್ಯಾಡಿ ಶಿರಾಡಿ ಗ್ರಾಮದ ಕುದ್ಕೊಳಿ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಪದ್ಮನಾಭ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿದಾರರ ವಿಚಾರಣೆಯ ಸಂದರ್ಭದಲ್ಲಿ ಆರೋಪ ಸಾಬೀತುಪಡಿಸುವ ಯಾವುದೇ ಸ್ಪಷ್ಟ ಪುರಾವೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ, ಪುತ್ತೂರಿನ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಶಿವಣ್ಣ ಅವರು ಆರೋಪಿ ಪದ್ಮನಾಭ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದರು. ಆರೋಪಿಪರ ವಾದವನ್ನು ನ್ಯಾಯವಾದಿ ಮಹೇಶ್ ಕಜೆ ಅವರು ಮಂಡಿಸಿದ್ದರು.


ಉದ್ಘಾಟನೆಯ ಬಳಿಕ ಪ್ರಥಮ ತೀರ್ಪು
ಬನ್ನೂರಿನ ಆನೆಮಜಲಿಯಲ್ಲಿ ನಿರ್ಮಾಣಗೊಂಡ ನೂತನ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿದ ದಿನವೇ ಮಧ್ಯಾಹ್ನದ ಬಳಿಕ ನ್ಯಾಯಾಲಯದ ಕಲಾಪ ಆರಂಭಗೊಂಡಿದ್ದು, ಇದೀಗ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಥಮ ತೀರ್ಪು ಪ್ರಕಟಗೊಂಡಿರುವುದು ವಿಶೇಷವಾಗಿದೆ.


