ಬೆಳ್ಳಾರೆ: ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಗೆ ಒಂದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.


ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಎಂ.ಸಿ. ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಸುಳ್ಯದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ತೇಜಸ್ವಿನಿ ಆರ್ ಅವರು ಆರೋಪಿಯನ್ನು ಪತ್ತೆ ಹಚ್ಚಿ ದೋಷಿ ಎಂದು ತೀರ್ಪು ನೀಡಿದರು.

ಪೊಲೀಸ್ ಕಾನ್ಸ್‌ಟೇಬಲ್ ಮನು ವಿ.ಎಂ ಅವರು ನ್ಯಾಯಾಲಯದ ಕರ್ತವ್ಯ ನಿರ್ವಹಿಸಿದರು. ಸರ್ಕಾರಿ ಅಭಿಯೋಜಕರ ಕಚೇರಿಯಲ್ಲಿ ಹಿರಿಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ರೇಷ್ಮಾ ಹೆಚ್.ಆರ್ ಅವರು ಪ್ರಕರಣದ ಪ್ರಕ್ರಿಯೆ ನಿರ್ವಹಣೆಯಲ್ಲಿ ಸಹಕರಿಸಿದರು.
ಪ್ರಕರಣದ ವಿವರ: 2018 ಜುಲೈ 25ರಂದು ಬೆಳಿಗ್ಗೆ 9.30ರಿಂದ ಸಂಜೆ 4.45ರ ಅವಧಿಯಲ್ಲಿ, ಮನೆಯ ಕಪಾಟಿನ ಲಾಕರ್ ಮುರಿದು ನಗದು ₹26,500 ಹಾಗೂ 6 ಪವನ್ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. (4 ಪವನ್ ಮತ್ತು 2 ಪವನ್ ತೂಕದ ಸರಗಳು ಸೇರಿ) ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.


ನ್ಯಾಯಾಲಯವು ಐಪಿಸಿ ಕಲಂ 454 ಅಡಿ ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹3,000 ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ ಒಂದು ತಿಂಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಹಾಗೆಯೇ ಐಪಿಸಿ ಕಲಂ 380 ಅಡಿ ಒಂದು ವರ್ಷದ ಸರಳ ಕಾರಾಗೃಹ ಶಿಕ್ಷೆ ಮತ್ತು ₹3,000 ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ ಒಂದು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಎರಡೂ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗಲಿವೆ ಎಂದು ನ್ಯಾಯಾಲಯ ಆದೇಶಿಸಿದೆ.
ಈ ಮೂಲಕ 2018ರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ನ್ಯಾಯ ದೊರೆತಂತಾಗಿದೆ.



