ಸುಳ್ಯ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಫೆಬ್ರವರಿ 24ರಂದು ಅನಂತುಡು ಗ್ರಾಮದಲ್ಲಿ ಸಂಭವಿಸಿದೆ.



ಅರಂತೋಡು ಗ್ರಾಮದ ಕರಿಂಬಿ ಮನೆಯ ನಿವಾಸಿ ಶೇಸಮ್ಮ ಅವರು ಮಂಗಳವಾರ ತಮ್ಮ ತೋಟದಲ್ಲಿ ಕೊಕ್ಕೋ ಕೊಯ್ಯುವ ಕೆಲಸದಲ್ಲಿ ನಿರತರಾಗಿದ್ದ ವೇಳೆ ಪೊದೆಯಲ್ಲಿದ್ದ ಕಾಡುಕೋಣ ಏಕಾಏಕಿ ಅವರ ಮೇಲೆ ಎರಗಿದೆ. ದಾಳಿಯಿಂದಾಗಿ ಶೇಸಮ್ಮ ಅವರ ತೊಡೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಸ್ಥಳೀಯರು ತಕ್ಷಣವೇ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ.



ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾಡುಕೋಣಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

