ಬೆಂಗಳೂರು: ಬಿಪಿಎಲ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನೀಡಿರುವ ಕಾಲಾವಕಾಶ ಮುಕ್ತಾಯಕ್ಕೆ ಇದೀಗ ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಬಿಪಿಎಲ್ ಪಟ್ಟಿಯಿಂದ ಎಪಿಎಲ್ ಪಟ್ಟಿಗೆ ವರ್ಗಾವಣೆಯಾದ ಸಾವಿರಾರು ಕಾರ್ಡ್‌ಧಾರಕರು ತಮ್ಮ ಕಾರ್ಡ್‌ಗಳು ಅನ್ಯಾಯವಾಗಿ ಡಿಲೀಟ್ ಆಗಿವೆ ಎಂದು ಆರೋಪಿಸಿ, ಪುನಃ ಬಿಪಿಎಲ್ ಪಟ್ಟಿಗೆ ಸೇರಿಸಲು ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ.



ಬಿಪಿಎಲ್ ಮಾನದಂಡಗಳಿಗೆ ತಾವು ಅರ್ಹರಾಗಿರುವುದನ್ನು ದಾಖಲೆಗಳ ಮೂಲಕ ಸಾಬೀತುಪಡಿಸದಿದ್ದಲ್ಲಿ, ಸಂಬಂಧಿಸಿದ ಕಾರ್ಡ್‌ಗಳು ಶಾಶ್ವತವಾಗಿ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಯಾಗಲಿವೆ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ. ತೆರಿಗೆ ಪಾವತಿ ಇಲ್ಲ, ಸ್ವಂತ ಜಮೀನು ಇಲ್ಲ, ಸ್ವಂತ ಮನೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡ್ ಡಿಲೀಟ್ ಆಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರ್ಕಾರ ಎಚ್ಚೆತ್ತುಕೊಂಡು, ಬಿಪಿಎಲ್ ಮಾನದಂಡದ ಒಳಗೇ ಇದ್ದೇವೆ ಎಂಬುದನ್ನು ದೃಢಪಡಿಸಲು ಕಾರ್ಡ್‌ಧಾರಕರಿಗೆ 45 ದಿನಗಳ ಕಾಲಾವಕಾಶ ನೀಡಿದ್ದು, ಕಳೆದ ಅಕ್ಟೋಬರ್ 30ರಿಂದ ಪರಿಷ್ಕರಣೆ ಪ್ರಕ್ರಿಯೆ ಆರಂಭಗೊಂಡಿದೆ.



ಕೊನೆಯ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್‌ಧಾರಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ರಾಜ್ಯದಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ನಡೆಯುತ್ತಿದೆ ಎನ್ನಲಾಗಿದೆ.
ಡಿಲೀಟ್ ಆಗಿರುವ ಕಾರ್ಡ್‌ಧಾರಕರು ತಮ್ಮ ಸಂಬಂಧಿತ ದಾಖಲೆಗಳನ್ನು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸಲ್ಲಿಸಬೇಕು. ಅಂಗಡಿ ಮಾಲೀಕರು ದಾಖಲೆಗಳನ್ನು ಸಂಗ್ರಹಿಸಿ ಆಹಾರ ಇಲಾಖೆಗೆ ರವಾನೆ ಮಾಡಲಿದ್ದು, ಸಲ್ಲಿಸಿದ ದಾಖಲೆಗಳು ಸರಿಯಾಗಿದ್ದರೆ ಮಾತ್ರ ಬಿಪಿಎಲ್ ಕಾರ್ಡ್ ಮರುಪಡೆಯಲು ಅವಕಾಶ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


