ಸುಳ್ಯ: ಸುಳ್ಯತಾಲೂಕಿನ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಶ್ರೀ ತತ್ವಮಸಿ ಎಂಟರ್ಪ್ರೈಸಸ್ (ರಿ.) ಎಂಬ ಹೆಸರಿನಲ್ಲಿ ‘ಬೆನಿಫಿಟ್ ಸ್ಕೀಮ್’ ಆರಂಭಿಸಿ, ಏಜೆಂಟ್‌ಗಳ ಮೂಲಕ ಸಾರ್ವಜನಿಕರಿಂದ ಕಂತುಗಳ ರೂಪದಲ್ಲಿ ಹಣ ಸಂಗ್ರಹಿಸಿ ವಂಚನೆ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆಯನ್ನು ಘೋಷಿಸಿದೆ.
ಸಂಸ್ಥೆ 415 ಸದಸ್ಯರಿಂದ ಒಟ್ಟು ₹30,86,250 ಹಣ ಸಂಗ್ರಹಿಸಿ, ಯಾವುದೇ ಹಣ ವಸ್ತುವನ್ನೂ ನೀಡದೆ ಸಾರ್ವಜನಿಕರನ್ನು ವಂಚಿಸಿದ್ದಾಗಿ ದೂರು ದಾಖಲಾಗಿತ್ತು. ಈ ಸಂಬಂಧ ಶಿವಪ್ರಕಾಶ, ಕೆ.ಪಿ. ಗಣೇಶ್, ಕೆ.ಪಿ. ಕೃಷ್ಣಪ್ಪ ಗೌಡ, ಗೀತಾ ಕೆ.ಎಸ್., ಭಾರತಿ, ಗೀತಾ ಗಣೇಶ್, ಎನ್.ಇ.ವೈ. ಕಮಲಾಕ್ಷ ಹಾಗೂ ಕೆ. ನಾಗೇಶ ಎಂಬವರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 248/2014ರಲ್ಲಿ ಪ್ರಕರಣ ದಾಖಲಾಗಿತ್ತು.



ಪ್ರಕರಣವನ್ನು ಆಗಿನ ಠಾಣಾಧಿಕಾರಿ ಬ್ರಿಜೇಶ್ ಮತ್ಯು ಭಾಗಶಃ ತನಿಖೆ ನಡೆಸಿದ್ದು, ನಂತರ ಚಂದ್ರಶೇಖರ್ ಎಚ್.ವಿ. ಪೂರ್ಣ ತನಿಖೆ ನಡೆಸಿ ಎಸ್.ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಬಿ. ಮೋಹನ್ ಬಾಬು ಅವರ ನ್ಯಾಯಾಲಯದಲ್ಲಿ ನಡೆದು, 30.10.2025ರಂದು ಆರೋಪಿಗಳಲ್ಲಿ 2, 4 ಮತ್ತು 5ನೇ ಆರೋಪಿಗಳ ಅಪರಾಧ ಸಾಬೀತಾಗಿ ಅವರನ್ನು ದೋಷಿಗಳೆಂದು ತೀರ್ಮಾನಿಸಲಾಯಿತು. 3, 6, 7 ಮತ್ತು 8ನೇ ಆರೋಪಿ ಮೇಲೆ ಆರೋಪ ಸಾಬೀತಾಗದೆ ಅವರನ್ನು ಬಿಡುಗಡೆ ಮಾಡಲಾಯಿತು.




