ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದು, ರೂ.1.10 ಕೋಟಿಗೂ ಅಧಿಕ ಹಣದ ಅನಧಿಕೃತ ವರ್ಗಾವಣೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಪುತ್ತೂರಿನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಹಾಗೂ ಸಂಘದ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ, 2025ರ ಜೂನ್‌ನಿಂದ ಅಕ್ಟೋಬರ್ ತನಕದ ಐದು ತಿಂಗಳ ಅವಧಿಯಲ್ಲಿ ಸಂಘದ ಸದಸ್ಯರಲ್ಲದವರಿಂದ ಬೇನಾಮಿಯಾಗಿ ಸಂಘದ ಖಾತೆಗೆ ರೂ.1,11,10,000 ಹಣ ಹಲವು ಕಂತುಗಳಲ್ಲಿ ಜಮೆಯಾಗಿರುವುದು ಗಂಭೀರ ಸಂಗತಿ ಎಂದು ಆರೋಪಿಸಿದರು.



ನವೀನ್ ಡಿ ಅವರ ಅಧ್ಯಕ್ಷತೆಯ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ಅನಧಿಕೃತ ಹಣ ವರ್ಗಾವಣೆ ನಡೆಯುತ್ತಿದೆ. ಜಮೆಯಾದ ಹಣವನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿಕೊಂಡು ಸಂಘದ ಹಿರಿಯ ಗುಮಾಸ್ತ ಜಯರಾಮ ಬಿ ಅವರ ಉಳಿತಾಯ ಖಾತೆಗೆ ಬೇರೆ ಬೇರೆ ದಿನಗಳಲ್ಲಿ ವರ್ಗಾವಣೆ ಮಾಡಿದ್ದಾರೆ ಎಂದು ದೂರಿದರು.
ಪ್ರಕರಣ ಬಹಿರಂಗವಾದ ನಂತರ ಹಿರಿಯ ಗುಮಾಸ್ತ ಜಯರಾಮ ಅವರಿಗೆ ಜನವರಿ 21 ಹಾಗೂ ಫೆಬ್ರವರಿ 23ರಂದು ಕಾರಣ ಕೇಳುವ ನೋಟಿಸ್ ಜಾರಿಗೊಳಿಸಿ, ಅವ್ಯವಹಾರದ ಹಣವನ್ನು ಸಂಘಕ್ಕೆ ಮರಳಿ ಪಾವತಿಸಲು ಸೂಚಿಸಲಾಗಿದೆ. ಅಲ್ಲದೆ ಅವರನ್ನು ಹಿರಿಯ ಗುಮಾಸ್ತ ಹುದ್ದೆಯಿಂದ ಕಿರಿಯ ಗುಮಾಸ್ತ ಹುದ್ದೆಗೆ ಹಿಂಬಡ್ತಿ ನೀಡಿ ಸಂಘದ ಆನಾಜೆ ಶಾಖೆಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.



ಈ ವಿಚಾರವನ್ನು ಸಹಕಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಾರದೆ ಪ್ರಕರಣ ಮುಚ್ಚಿಹಾಕಲು ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಈ ಕುರಿತು ಸಹಕಾರಿ ಸಂಘಗಳ ಸಹಾಯಕ ನಿಬಂಧಕರು, ಜಂಟಿ ನಿಬಂಧಕರು, ವಿಭಾಗೀಯ ನಿಬಂಧಕರು, ರಾಜ್ಯ ಸಹಕಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಈಗಾಗಲೇ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ಕುರಿತು ಮೇಲಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಪರಮೇಶ್ವರ ಭಂಡಾರಿ, ಮಾಜಿ ನಿರ್ದೇಶಕರಾದ ಹೊನ್ನಪ್ಪ ಪೂಜಾರಿ ಕೈಂದಾಡಿ, ಮೋಹನ ಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ವಕ್ತಾರ ರವೀಂದ್ರ ರೈ ನೆಕ್ಕಿಲು ಉಪಸ್ಥಿತರಿದ್ದರು.


