ಪುತ್ತೂರು:
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ, ಪುತ್ತೂರು ಶಾಖೆಯ 7ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ಘಟಕ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವದ ಸಹಯೋಗದಲ್ಲಿ, ಮಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರ ತಂಡದ ಮೂಲಕ ರವಿವಾರ ಪುತ್ತೂರು ಪತ್ರಿಕಾ ಭವನದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ವಾಸು ನಾಯ್ಕ್, “ಮಾನವನಿಗೆ ಕಣ್ಣು ಅತ್ಯಂತ ಮುಖ್ಯವಾದ ಅಂಗ. ಆರೋಗ್ಯದ ರಕ್ಷಣೆ ಅನಿವಾರ್ಯ. ಈ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಮುಂದಾಳತ್ವದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿ, ಸಾಮಾಜಿಕ ಸೇವೆ ಮುಂದುವರಿಯಲಿ” ಎಂದು ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಸಂಘದ ಮೂಲಕ ಇದುವರೆಗೆ 96ನೇ ಶಿಬಿರ ಆಯೋಜನೆಯಾಗಿದ್ದು, 14 ಸಾವಿರಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಕಣ್ಣಿನ ತಪಾಸಣೆ ಶಿಬಿರದಲ್ಲಿ ಹಿಂದೆಯೂ ನಮ್ಮ ಸಂಸ್ಥೆ ಕೈಜೋಡಿಸಿರುವುದು ಸಂತಸದ ವಿಷಯ. ಮುಂದೆಯೂ ಇಂತಹ ಜನಪರ ಕಾರ್ಯಕ್ರಮಗಳಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.




ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಹಕಾರ ಕ್ಷೇತ್ರದ ಜೊತೆಗೆ ಸಮಾಜ ಸೇವೆಯೂ ಸಂಘದ ಪ್ರಮುಖ ಆದ್ಯತೆಯಾಗಿದೆ. ಪ್ರತೀ ಶಾಖೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇಂದಿನ ಶಿಬಿರ ಯಶಸ್ವಿಗೆ ಸಹಕರಿಸಿದ ನೇತ್ರ ಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಆಡಳಿತ ವರ್ಗ, ವೈದ್ಯರು, ಸಿಬ್ಬಂದಿ ಹಾಗೂ ಸಹಭಾಗಿಯಾದ ಎಲ್ಲ ಸಂಸ್ಥೆಗಳ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಗೋಪಾಲ್ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಪಿ.ಆರ್.ಓ. ಮನೋಹರ್ ಹಾಗೂ ವೈದ್ಯಾಧಿಕಾರಿ ಡಾ. ಶಿಲ್ಪಾ ಉಪಸ್ಥಿತರಿದ್ದರು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ಘಟಕದ ಅಧ್ಯಕ್ಷ ಸಿದ್ದಿಕ್ ನೀರಾಜೆ ಸ್ವಾಗತಿಸಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಕುಸುಮ್ ರಾಜ್ ವಂದಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ತುಂಬೆ ಶಾಖೆಯ ಶಾಖಾಧಿಕಾರಿ ಧನಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.
ಶಿಬಿರದಲ್ಲಿ ಒಟ್ಟು 105 ಮಂದಿಗೆ ಉಚಿತ ನೇತ್ರ ತಪಾಸಣೆ ನಡೆಸಲಾಗಿದ್ದು, 52 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.


