ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಧರ್ಮಸ್ಥಳ, ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲ್ಲೂಕಿನ ಜಂಟಿ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಯಡಿ ಯೋಜನೆ ಪಾಲುದಾರ ಬಂಧುಗಳಿಗೆ ಉಚಿತವಾಗಿ ಐದು ದಿನಗಳ ಸಾರಿ ಫೋಲ್ಡಿಂಗ್ ಹಾಗೂ ಸಾರಿಗೊಂಡೆ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಪತ್ತಿನ ಸಹಕಾರಿ ಸಂಘ ಕೊಳ್ತಿಗೆ ಇಲ್ಲಿನ ಅಧ್ಯಕ್ಷ ತೀರ್ಥಾನಂದ ದುಗ್ಗಳ ಅವರು ನೆರವೇರಿಸಿದರು. ಮಹಿಳೆಯರನ್ನು ಸ್ವಾವಲಂಬಿಯಾಗಿ, ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಯೋಜನೆಯಿಂದ ಹಮ್ಮಿಕೊಳ್ಳಲಾಗಿರುವ ಈ ತರಬೇತಿ ಅತ್ಯಂತ ವಿಶೇಷವಾಗಿದೆ. ಇದರ ಸದುಪಯೋಗ ಪಡೆದು ಮಹಿಳೆಯರು ಸದೃಢರಾಗಬೇಕು ಎಂದು ಅವರು ಶುಭ ಹಾರೈಸಿದರು.

ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಅವರು ಮಾತನಾಡಿ, ಯೋಜನೆಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಸಮಾಜಕ್ಕೆ ಪೂರಕವಾಗಿದೆ. ಉದ್ಯೋಗವು ಒಂದು ಕುಟುಂಬದ ಆರ್ಥಿಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದ್ದು, ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಂಡು ಕುಟುಂಬಕ್ಕೆ ಬಲ ನೀಡುತ್ತಿದ್ದಾರೆ. ಈ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಸ್ವಾವಲಂಬಿಯಾಗಿ ಬದುಕಬೇಕೆಂದು ಕರೆ ನೀಡಿದರು.
CRE ತರಬೇತಿ ಸಂಸ್ಥೆ ಬೆಳ್ತಂಗಡಿ ಇಲ್ಲಿನ ಉಪನ್ಯಾಸಕಿ ಧರಣಿ ಅವರು ಮಾತನಾಡಿ, “ಉದ್ಯೋಗಂ ಮಾನವ ಲಕ್ಷಣಂ” ಎಂಬ ತತ್ವದಂತೆ ಪೂಜ್ಯ ಖಾವಂದರು ಹಾಗೂ ಮಾತೃ ಶ್ರೀ ಅಮ್ಮನವರ ಮೂಲ ಪರಿಕಲ್ಪನೆಯಿಂದ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಉದ್ಯೋಗ ತರಬೇತಿಗಳನ್ನು ಒದಗಿಸಲಾಗಿದೆ. ಈ ತರಬೇತಿ ಪಡೆದ ಫಲಾನುಭವಿಗಳು ಮುಂದಾಗಿ ಸ್ವಉದ್ಯೋಗ ಆರಂಭಿಸಿ ಇತರ ಮಹಿಳೆಯರಿಗೂ ತರಬೇತಿ ನೀಡುವಂತಾಗಬೇಕು ಎಂದು ಹೇಳಿದರು. ತರಬೇತಿಯ ನಿಯಮಾವಳಿ ಹಾಗೂ ಕಾರ್ಯಕ್ರಮದ ಮೂಲ ಉದ್ದೇಶವನ್ನು ವಿವರಿಸಿದರು.
ಕೆದಂಬಾಡಿ ವಲಯದ ಜನಜಾಗೃತಿ ವಲಯಾಧ್ಯಕ್ಷ ಶ್ಯಾಮ್ ಸುಂದರ್ ರೈ ಮಾತನಾಡಿ, ಸ್ವಾವಲಂಬಿ ಜೀವನ ನಡೆಸಲು ಯೋಜನೆಯಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಹಿಳೆಯರು ಮನೆಗೆ ಮಾತ್ರ ಸೀಮಿತರಾಗದೆ ಆರ್ಥಿಕವಾಗಿ ಸಬಲರಾಗಲು ಈ ತರಬೇತಿ ಬಹಳ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪುತ್ತೂರು ತಾಲ್ಲೂಕಿನ ಗೌರವಾನ್ವಿತ ಯೋಜನಾಧಿಕಾರಿ ಶಶಿಧರ ಎಂ., ಪುತ್ತೂರು ತಾಲ್ಲೂಕಿನ ಕೇಂದ್ರ ಒಕ್ಕೂಟಗಳ ಅಧ್ಯಕ್ಷ ಉದಯಕುಮಾರ್, ನವೋದಯ ಸಂಘಗಳ ಅಧ್ಯಕ್ಷ ಅಶೋಕ್, ಕೆದಂಬಾಡಿ ವಲಯದ ಮೇಲ್ವಿಚಾರಕಿ ಶುಭವತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಅಂಗನವಾಡಿ ಶಿಕ್ಷಕಿ ಪೂರ್ಣಿಮಾ, ಐದು ದಿನಗಳ ತರಬೇತಿ ನೀಡುವ ಶಿಕ್ಷಕಿ ದಿವ್ಯಶ್ರೀ, ಸೇವಾ ಪ್ರತಿನಿಧಿಗಳಾದ ಶಾರದ ಹಾಗೂ ಅರುಣ, ತರಬೇತಿ ಪಡೆಯುತ್ತಿರುವ ಸದಸ್ಯರು ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *