ಶ್ರೀ ಕ್ಷೇತ್ರ ಧರ್ಮಸ್ಥಳವು ತನ್ನ ವಾರ್ಷಿಕ ಮಹೋತ್ಸವವಾದ ಲಕ್ಷದೀಪೋತ್ಸವದ ಸಂಭ್ರಮಕ್ಕೆ ಸಜ್ಜಾಗಿದೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನವೆಂಬರ್ 15 ರಿಂದ 20 ರವರೆಗೆ ಆರು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಲಕ್ಷದೀಪೋತ್ಸವದ ಪ್ರಮುಖ ಆಕರ್ಷಣೆಗಳು:
ನ. 15: ಬೆಳಗ್ಗೆ ಪ್ರೌಢ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ಸಂಜೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭಕ್ತಿ ಭಜನೆಯ ಪಾದಯಾತ್ರೆ ನಡೆಯಲಿದೆ. ರಾತ್ರಿ ಶ್ರೀ ಮಂಜುನಾಥ ಸ್ವಾಮಿಗೆ ಹೊಸಕಟ್ಟೆ ಉತ್ಸವ ಜಗಲಿದೆ.

ನ. 16: ಕೆರೆಕಟ್ಟೆ ಉತ್ಸವ ಆಯೋಜಿಸಲಾಗಿದೆ.
ನ. 17: ಲಲಿತೋದ್ಯಾನ ಉತ್ಸವ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾಗೋಷ್ಠಿ ನಡೆಯಲಿದೆ.
ನ. 18: ಕಂಚಿಮಾರುಕಟ್ಟೆ ಉತ್ಸವದ ಜೊತೆಗೆ ಸರ್ವಧರ್ಮ ಸಮ್ಮೇಳನವು ಲಕ್ಷದೀಪೋತ್ಸವದ ಪ್ರಮುಖ ಆಕರ್ಷಣೆಯಾಗಿರಲಿದೆ.
ನ. 19: ಗೌರಿಮಾರುಕಟ್ಟೆ ಉತ್ಸವ ಹಾಗೂ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.
ನ. 20: ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವಕ್ಕೆ ತೆರೆ ಬೀಳಲಿದೆ.

ಧರ್ಮಸ್ಥಳ ಯಕ್ಷಗಾನ ಮೇಳದ ಪ್ರಥಮ ಸೇವೆಯಾಟ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ತಿರುಗಾಟದ ಪೂರ್ವಭಾವಿಯಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಪ್ರಥಮ ಸೇವೆಯಾಟ ನಡೆಯಿತು.

ನವೆಂಬರ್ 5 ರಿಂದ 15 ರವರೆಗೆ ಮತ್ತು ನವೆಂಬರ್ 20 ರಿಂದ 22 ರವರೆಗೆ ಪ್ರತಿದಿನ ಸಂಜೆ 7 ಗಂಟೆಯಿಂದ ಸೇವಾರ್ಥಿಗಳ ಸೇವೆಯ ಯಕ್ಷಗಾನ ಪೌರಾಣಿಕ ಪ್ರಸಂಗಗಳು ಪ್ರದರ್ಶಿಸಲ್ಪಡಲಿವೆ.

ಲಕ್ಷದೀಪೋತ್ಸವದ ಬಳಿಕ, ನವೆಂಬರ್ 23 ರಂದು ಮೇಳದ ಶ್ರೀ ಮಹಾಗಣಪತಿ ದೇವರ ದಿಗ್ವಿಜಯ ಯಾತ್ರೆಯು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಆರಂಭವಾಗಲಿದೆ.

ಈ ವರ್ಷದ ಲಕ್ಷದೀಪೋತ್ಸವವು ಭಕ್ತಾದಿಗಳಿಗೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಸದೌತಣ ನೀಡಲು ಸಜ್ಜಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *