ಬೆಂಗಳೂರು, :
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಹಲವು ಪ್ರಮುಖ ಅಧಿಕಾರಗಳನ್ನು ಪಟ್ಟಣ ಪಂಚಾಯತ್ಗಳಿಗೆ ವರ್ಗಾಯಿಸಿರುವ ಕ್ರಮದಿಂದ ಗ್ರಾಮೀಣ ಭಾಗದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

ಅವರು ಬುಧವಾರ ಬೆಂಗಳೂರಿನ ಕುಮಾರ ಪಾರ್ಕ್ನ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ “ಗ್ರಾಮಸಭೆಗಳು ಹಾಗೂ ಗ್ರಾಮ ಪಂಚಾಯತ್ಗಳು ಸಂವಿಧಾನ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆಯ ಆಶಯದಂತೆ ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣ ಸೃಷ್ಟಿಸುವುದು” ವಿಷಯದ ಸಭೆಯಲ್ಲಿ ಮಾತನಾಡಿದರು.





ನಮೂನೆ 9/11, ಭೂ ಅಭಿವೃದ್ಧಿ ಹಾಗೂ ಕಟ್ಟಡ ಅನುಮೋದನೆಗೆ ಸಂಬಂಧಿಸಿದ ಅಧಿಕಾರಗಳನ್ನು ಗ್ರಾಮ ಪಂಚಾಯತ್ಗಳಿಂದ ತೆಗೆದು ಪಟ್ಟಣ ಪಂಚಾಯತ್ಗಳಿಗೆ ನೀಡಿರುವುದು ವಿಕೇಂದ್ರೀಕರಣದ ಮೂಲ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಇದರಿಂದ ಗ್ರಾಮಸ್ಥರು ಮತ್ತೆ ತಾಲೂಕು ಹಾಗೂ ನಗರ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮಗಳ ಸ್ವಚ್ಛತೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಗ್ರಾಮ ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತದೆ ಎಂಬ ಆಶಯ ಸಾಕಾರಗೊಳ್ಳುತ್ತಿದೆ ಎಂದರು. ಆದರೆ ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದ್ದು, ರತ್ನಗರ್ಭ ವಸುಂಧರೆಯಾದ ಭೂಮಿ ಬರಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಎಚ್ಚರಿಸಿದರು.
ಜಲ್ ಜೀವನ್ ಮಿಷನ್ (ಹರ್ ಘರ್ ಜಲ್) ಯೋಜನೆಯನ್ನು ಶ್ಲಾಘಿಸಿದ ಅವರು, ಕೆಲವೆಡೆ ನೀರಿನ ಸಂಪರ್ಕ ಇದ್ದರೂ ಸರಬರಾಜು ಇಲ್ಲದಿರುವುದು, ತಾಂತ್ರಿಕ ದೋಷಗಳು ಹಾಗೂ ನಿರ್ವಹಣೆಯ ಕೊರತೆಗಳಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದರು. ಈ ಬಗ್ಗೆ ಅಧಿಕಾರಿಗಳಷ್ಟೇ ಅಲ್ಲದೆ ಜನಪ್ರತಿನಿಧಿಗಳು, ಗ್ರಾಮಸಭೆಗಳು ಹಾಗೂ ಸಾರ್ವಜನಿಕರೂ ಪ್ರಶ್ನಿಸಬೇಕೆಂದು ಅವರು ಅಭಿಪ್ರಾಯಪಟ್ಟರು.


ಗ್ರಾಮ ಪಂಚಾಯತ್ಗಳಿಗೆ ಲಭ್ಯವಾಗುವ ವಾರ್ಷಿಕ ಅನುದಾನ ಕಡಿಮೆಯಾಗುತ್ತಿರುವುದು, ಸಿಬ್ಬಂದಿ ನೇಮಕಾತಿ ನಡೆಯದಿರುವುದರಿಂದ ಗ್ರಾಮಸಭೆಗಳಂತಹ ಪ್ರಜಾಸತ್ತಾತ್ಮಕ ವೇದಿಕೆಗಳು ದುರ್ಬಲವಾಗುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಅವರು ಹೇಳಿದರು. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಪಂಚಾಯತ್ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಒತ್ತಾಯಿಸಿದರು.
MGNREGA ಯೋಜನೆಯಲ್ಲಿ ಇತ್ತೀಚೆಗೆ ಮಾಡಿದ ಬದಲಾವಣೆಗಳು ಗ್ರಾಮೀಣ ಜನರಿಗೆ ಉದ್ಯೋಗ ಭರವಸೆ ನೀಡಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಿದ ಅವರು, ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಇನ್ನಷ್ಟು ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಗ್ರಾಮ ಪಂಚಾಯತ್ಗಳಿಗೆ ಅಧಿಕಾರ, ಅನುದಾನ ಮತ್ತು ಸಿಬ್ಬಂದಿ – ಈ ಮೂರನ್ನೂ ಸಮರ್ಪಕವಾಗಿ ಒದಗಿಸಿದಾಗ ಮಾತ್ರ ಸಂವಿಧಾನಾತ್ಮಕ ವಿಕೇಂದ್ರೀಕರಣ ನಿಜಾರ್ಥದಲ್ಲಿ ಸಾಧ್ಯವಾಗಲಿದೆ ಎಂದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು.


