ಪುತ್ತೂರು: ವಿವೇಕಾನಂದ ಕಾಲೇಜು ಪುತ್ತೂರು ಇದರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸುನಾದ ಸಂಗೀತ ಕಲಾಶಾಲೆ, ವಿವೇಕಾನಂದ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರ ಹಾಗೂ ಲಲಿತ ಕಲಾಸಂಘಗಳ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಮಾರ್ಚ್ 11ರಂದು ‘ಹಂಸಧ್ವನಿ’ ಸುನಾದ ವಿವೇಕ ಸ್ಮೃತಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀಕೃಷ್ಣ ಗಣರಾಜ್ ಭಟ್ ತಿಳಿಸಿದ್ದಾರೆ.




ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮವನ್ನು ಸುನಾದ ಕಲಾಶಾಲೆಯ ನಿರ್ದೇಶಕ ವಿದ್ವಾನ್ ಎ. ಈಶ್ವರ ಭಟ್ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ‘ಸಂಗೀತ ಮತ್ತು ಜೀವನ ಮೌಲ್ಯ’ ವಿಷಯದ ಕುರಿತು ವಿದ್ವಾನ್ ಟಿ.ಎಸ್. ಪಟ್ಟಾಭಿರಾಮ್ ಪಂಡಿತ್ ಉಪನ್ಯಾಸ ನೀಡಲಿದ್ದು, ‘ಸಂಗೀತ ಮತ್ತು ಭಾವ’ ವಿಷಯದ ಕುರಿತು ವಿದ್ವಾನ್ ವಿಠಲರಾಮಮೂರ್ತಿ ಮಾತನಾಡಲಿದ್ದಾರೆ. ಮೂರನೇ ಅವಧಿಯಲ್ಲಿ ‘ಪ್ರದರ್ಶನಂ – ಭಾವ ರಾಗ ತಾಳ ನಾಟ್ಯಂ’ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಹಾಗೂ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಭಾಗವಹಿಸಲಿದ್ದಾರೆ.
ಅಪರಾಹ್ನ 2 ಗಂಟೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಗಾಯನದಲ್ಲಿ ವಿದ್ವಾನ್ ಟಿ.ಎಸ್. ಪಟ್ಟಾಭಿರಾಮ್ ಪಂಡಿತ್, ವಯಲಿನ್‌ನಲ್ಲಿ ವಿದ್ವಾನ್ ವಿಠಲರಾಮ ಮೂರ್ತಿ, ಮೃದಂಗದಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್ ಹಾಗೂ ಮೋರ್ಸಿಂಗ್‌ನಲ್ಲಿ ಬಾಲಕೃಷ್ಣ ಹೊಸಮನೆ ಸಂಗತ ನೀಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುನಾದ ಸಂಸ್ಥೆಯ ನಿರ್ದೇಶಕ ಕಾಂಚನ ಈಶ್ವರ ಭಟ್, ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಆರ್. ನಿಡ್ಪಳ್ಳಿ ಉಪಸ್ಥಿತರಿದ್ದರು.


