ಪುತ್ತೂರು: ಬಂಟ್ವಾಳ ತಾಲೂಕಿನ ಕರೋಪಾಡಿ–ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ನಡೆಯಲಿರುವ ಪುನ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆ ಬಳಿಯ ಹಿಂದೂ ಜಾಗರಣಾ ವೇದಿಕೆ ಕಚೇರಿಯನ್ನು ಹಸಿರು ಹೊರೆಕಾಣಿಕೆ ಸಂಗ್ರಹ ಕಚೇರಿಯಾಗಿ ಪರಿವರ್ತಿಸಿ ಉದ್ಘಾಟಿಸಲಾಯಿತು.

ಖ್ಯಾತ ವೈದ್ಯರಾದ ಡಾ. ಎಂ.ಕೆ. ಪ್ರಸಾದ್ ಭಂಡಾರಿ ದೀಪ ಪ್ರಜ್ವಲನೆ ಮೂಲಕ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್ ಮಾತನಾಡಿ, ಬ್ರಹ್ಮಕಲಶೋತ್ಸವಕ್ಕೆ ದೇವಾಲಯ ಸಮಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸಲಾಗುವುದು ಎಂದು ಹೇಳಿದರು.
ಡಾ. ಸುರೇಶ್ ಪುತ್ತೂರಾಯ ಅವರು ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಭೇದಭಾವವಿಲ್ಲದೆ ಸಹಕರಿಸಬೇಕು ಎಂದು ಕರೆ ನೀಡಿದರು. ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಉದ್ಯಮಿ ಉಜ್ವಲ್ ಪ್ರಭು ಮಾತನಾಡಿ, ಈ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ತಿಳಿಸಿದರು.
ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು, 12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವವು ಸಂಪ್ರದಾಯಗಳ ಪುನರುಜ್ಜೀವನಕ್ಕೆ ಮಹತ್ವದ್ದಾಗಿದೆ ಎಂದು ಹೇಳಿದರು.
ಮಾರ್ಚ್ 30ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಆರಂಭವಾಗಿ, 11 ಪವಿತ್ರ ನದಿಗಳ ನೀರನ್ನು ತೀರ್ಥ ರೂಪದಲ್ಲಿ ಸಂಗ್ರಹಿಸಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಆರತಿ ಬಳಿಕ ಪದ್ಯಾಣದತ್ತ ಮೆರವಣಿಗೆ ಸಾಗಲಿದೆ ಎಂದು ಮಾಹಿತಿ ನೀಡಲಾಯಿತು.





ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.




