ಉಡುಪಿ: ಜಿಲ್ಲೆಯಲ್ಲಿ ಬೀಚ್ ಮತ್ತು ದೇಗುಲ ಪ್ರವಾಸೋದ್ಯಮವು ಪ್ರಮುಖವಾಗಿದ್ದು, ಈ ವರ್ಷ ಅಕ್ಟೋಬರ್ ತಿಂಗಳವರೆಗೂ ನಿರಂತರವಾಗಿ ಸುರಿದ ಮಳೆಯು ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಬೀಚ್‌ಗಳಲ್ಲಿ ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ತಡೆಬೇಲಿ ಹಾಕಲಾಗುತ್ತದೆ.
ಮಲ್ಪೆ ಬೀಚ್ ಸೇರಿದಂತೆ ಜಿಲ್ಲೆಯ ಬಹುತೇಕ ಬೀಚ್‌ಗಳಲ್ಲೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಾರಿ ಮಳೆ ನಿರಂತರವಾಗಿ ಸುರಿದ ಕಾರಣ ಹಾಗೂ ಕಡಲು ಪ್ರಕ್ಷುಬ್ಧವಾಗಿದ್ದ ಕಾರಣ ಬೀಚ್‌ಗಳಿಗೆ ಅಳವಡಿಸಿದ್ದ ತಡೆಬೇಲಿಗಳನ್ನು ತಡವಾಗಿ ತೆರವುಗೊಳಿಸಲಾಗಿತ್ತು.




ಪ್ರಸಿದ್ಧ ಪ್ರವಾಸಿ ತಾಣವಾದ ಸೇಂಟ್ ಮೇರಿಸ್ ದ್ವೀಪಕ್ಕೂ ಬೋಟ್ ಸೇವೆ ಅಲ್ಪ ತಡವಾಗಿಯೇ ಆರಂಭವಾಗಿತ್ತು. ಇದರಿಂದಾಗಿ ಈ ವರ್ಷ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಅಲ್ಪ ಕುಸಿದಿದೆ. ಕಳೆದ ವರ್ಷ ಜಿಲ್ಲೆಗೆ ಭೇಟಿ ನೀಡಿದ್ದ ಪ್ರವಾಸಿಗರ ಸಂಖ್ಯೆಗಿಂತ ಈ ವರ್ಷ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಬಂದಿದೆ. ಆದರೆ, ಈ ಬಾರಿ ಮಾತ್ರ ಕಳೆದ ವರ್ಷಕ್ಕಿಂತ ಅಲ್ಪ ಕುಸಿದಿದೆ.

ಜಿಲ್ಲೆಯ ಪ್ರವಾಸೋದ್ಯಮವು ಮುಖ್ಯವಾಗಿ ಬೀಚ್‌ಗಳನ್ನೇ ಆಧರಿಸಿದೆ. ಮಳೆಗಾಲದ ನಾಲ್ಕು ತಿಂಗಳು ಬೀಚ್‌ಗಳಲ್ಲಿ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗುತ್ತವೆ. ಈ ಬಾರಿ ಅಕ್ಟೋಬರ್ ತಿಂಗಳವರೆಗೂ ಮಳೆ ಮುಂದುವರಿದ ಕಾರಣ ಬೀಚ್‌ಗಳಲ್ಲಿ ತಡೆಬೇಲಿ ತೆರವಾಗದೆ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿತ್ತು. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಿಂದ ಬೀಚ್‌ಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಈ ಬಾರಿ ಅಲ್ಪ ವಿಳಂಬವಾಗಿಯೇ ಪ್ರವಾಸಿಗರು ಬೀಚ್‌ಗಳತ್ತ ಮುಖ ಮಾಡಿದ್ದರು.



