ಬೆಂಗಳೂರು: ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುವ ಮಕ್ಕಳಿಗೆ ಹೆಲ್ಮೆಟ್‌ ಮತ್ತು ಸುರಕ್ಷತಾ ಕ್ರಮಗಳುಳ್ಳ ಕೇಂದ್ರ ಮೋಟಾರು ವಾಹನ ನಿಯಮಗಳು 2022ರ ನಿಯಮ 138ರ ಅನುಷ್ಟಾನಕ್ಕೆ ಸಂಬಂಧಿಸಿದಂತೆ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ ನೀಡಿದೆ.

ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಅರ್ಚನಾ ಭಟ್ ಕೆ. ಎಂಬವರು 2023ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

ಮಕ್ಕಳಿಗಾಗಿ ಸುರಕ್ಷತಾ ಪರಿಕರಗಳನ್ನು ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು, 2022ರ ಸೆಕ್ಷನ್ 138(7)ರ ಮೂಲಕ ಪರಿಚಯಿಸಲಾಗಿದೆ, ಇದನ್ನು ಫೆಬ್ರವರಿ 15, 2022ರಂದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129ರ ಅಡಿ ಸೂಚಿಸಲಾಗಿದೆ. ಸುರಕ್ಷತಾ ಸಲಕರಣೆಗಳ ಜೊತೆಗೆ, ನಾಲ್ಕು ವರ್ಷ ವಯಸ್ಸಿನ ಮಗುವನ್ನು ಹಿಂಬದಿ ಸವಾರನಾಗಿ ಸಾಗಿಸುವಾಗ ಮೋಟಾರ್‌ಸೈಕಲ್​ನ್ನು ವೇಗವು ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚಿರಬಾರದು ಎಂದು ಹೊಸ ನಿಯಮಗಳು ತಿಳಿಸಲಿವೆ.

ಮಾರುಕಟ್ಟೆಯಲ್ಲಿ ಸುರಕ್ಷತಾ ಪರಿಕರಗಳ ಲಭ್ಯತೆ ಖಚಿತಪಡಿಸಿಕೊಂಡ ಬಳಿಕ ರಾಜ್ಯದಲ್ಲಿ ನಿಯಮವನ್ನು ಜಾರಿಗೊಳಿಸಲು ಅಧಿಕಾರಿಗಳಿಗೆ ಪೀಠ 6 ತಿಂಗಳ ಕಾಲಾವಕಾಶವನ್ನು ನೀಡಿತು. ಜೊತೆಗೆ 9 ತಿಂಗಳಿಂದ ನಾಲ್ಕು ವರ್ಷದೊಳಗಿನ ಮಗುವನ್ನು ಹಿಂಬದಿ ಸವಾರನಾಗಿ ಸಾಗಿಸುವಾಗ ಮೋಟಾರ್ ಸೈಕಲ್ ಸವಾರನು ಹೆಲ್ಮೆಟ್ ಮತ್ತು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಸಂಬಂಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮುಂದುವರೆಸಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಪೀಠ ನಿರ್ದೇಶನ ನೀಡಿದೆ.

Leave a Reply

Your email address will not be published. Required fields are marked *