ಕಡಬ, ಮಾ.4: ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ ಇದರ ಪ್ರಸಕ್ತ ಶೈಕ್ಷಣಿಕ ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮವು ಹನುಮಾನ್ ನಗರದ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ಉದ್ಯಮಿ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ನಂದನ್ ಮಲ್ಯ ಮಾತನಾಡಿ, ಸಣ್ಣ ವಯಸ್ಸಿನಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು. ಜೀವನದ ಸಾಮರ್ಥ್ಯವನ್ನು ಅರಿತುಕೊಂಡು ಸಮಾಜ ಹಾಗೂ ದೇಶಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.




ಇನ್ನೋರ್ವ ಮುಖ್ಯ ಅತಿಥಿಯಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ರಶ್ಮಿ ಜಿ.ಎಸ್. ದೀಪ ಪ್ರಜ್ವಲಿಸಿ, ತಾನು ಈ ಸಂಸ್ಥೆಯಲ್ಲಿ ಕಲಿತ ದಿನಗಳನ್ನು ಸ್ಮರಿಸಿಕೊಂಡು, ಇಲ್ಲಿ ಕಲಿಯುವ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಸಹ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣರಾವ್ ಮಂಕುಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಬೆಳವಣಿಗೆಯ ಕುರಿತು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕಿ ಸವಿತಾ ಶಿವಸುಬ್ರಮಣ್ಯ ಭಟ್ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ಹಣತೆ ಉರಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ ಹಿರಿಯರ ಆಶೀರ್ವಾದ ಪಡೆದುಕೊಂಡರು. ಹಿರಿಯ ವಿದ್ಯಾರ್ಥಿಗಳು ದೀಪ ಪ್ರದಾನ ಮಾಡುವ ಮೂಲಕ ಜವಾಬ್ದಾರಿಯನ್ನು ಕಿರಿಯರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ಎಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಾಧವ ಕೋಲ್ಪೆ, ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ವಸಂತ ಕೆ, ಪೋಷಕರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ಸಾನ್ವಿ ಎಚ್ ಸ್ವಾಗತಿಸಿ, ದಿಗಂತ್ ವಂದಿಸಿದರು. ಶಿಕ್ಷಕಿ ಸೌಮ್ಯ ಕೆ.ಎ ಅತಿಥಿಗಳನ್ನು ಪರಿಚಯಿಸಿ, ಪಿ.ಆರ್. ಚೇತನ್ ಗೌಡ ಕಾರ್ಯಕ್ರಮ ನಿರೂಪಿಸಿದರು.


