ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ–2ರಲ್ಲಿ ಇರುವ ಅವಿನಾಶ್ ಶೆಟ್ಟಿ ಅವರಿಗೆ ಸೇರಿದ ಆರ್ಕ ಕನ್ವೆನ್ಷನ್ ಹಾಲ್‌ನಲ್ಲಿ ಅಕ್ರಮವಾಗಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರು ಧರ್ಮಸ್ಥಳ ಠಾಣೆ ಪೊಲೀಸರೊಂದಿಗೆ ದಾಳಿ ನಡೆಸಿದರು.




ಡಿ. 22–12–2025ರ ರಾತ್ರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಕನ್ವೆನ್ಷನ್ ಹಾಲ್‌ನ ಮೊದಲ ಮಹಡಿಯ ಪಾರ್ಟಿ ಹಾಲ್‌ನಲ್ಲಿ ಹಲವರು ಸೇರಿಕೊಂಡು ಹಣ ಗಳಿಸುವ ಉದ್ದೇಶದಿಂದ ಕಾನೂನುಬಾಹಿರವಾಗಿ ‘ಅಂದರ್–ಬಾಹರ್’ ಇಸ್ಪಿಟ್ ಆಟ ಆಡುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಜೋರಾದ ಗದ್ದಲ ಉಂಟಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ಆಗುತ್ತಿತ್ತು ಎನ್ನಲಾಗಿದೆ.
ಪೊಲೀಸರು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ರಾಧಾಕೃಷ್ಣ (38), ವಚನ್ ಅಜಿಕುರಿ, ಅವಿನಾಶ್ ಶೆಟ್ಟಿ, ನಿಧಿಶ್ (30), ಅನ್ವರ್ (43), ಮಹಮ್ಮದ್ ಶಫೀಕ್ (38), ಇಬ್ರಾಹಿಂ (40), ಪರಮೇಶ್ವರ್ (57), ಶರೀಫ್ (38), ಉಬೈದುಲ್ಲಾ (43), ಪರಮೇಶ್ವರಪ್ಪ (56), ಅಶೋಕ್ (48), ಗಾಡ್ವಿನ್ ಗೋವಿಯಸ್ (60) ಸೇರಿದಂತೆ ಒಟ್ಟು 13 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 81/2025 ಅಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 79, 80 ಹಾಗೂ ಬಿಎನ್‌ಎಸ್–2023ರ ಕಲಂ 112ರಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.


