ಉಪ್ಪಿನಂಗಡಿ: ಬೆಳ್ತಂಗಡಿ ಉಪವಿಭಾಗದ ಪೊಲೀಸರ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಶೇಖರಿಸಿ ಇಟ್ಟಿದ್ದ ಸುಮಾರು 4,175 ಲೀಟರ್ ಡೀಸೆಲ್ ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ದಿನಾಂಕ 09-03-2026ರ ರಾತ್ರಿ, ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಮಾಹಿತಿ ಪ್ರಕಾರ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದಲ್ತಿಯಾರ್ ಪ್ರದೇಶದಲ್ಲಿ ಅಕ್ರಮವಾಗಿ ಬ್ಯಾರೆಲ್ ಮತ್ತು ಕ್ಯಾನ್‌ಗಳಲ್ಲಿ ಡೀಸೆಲ್ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿತ್ತು.

ಈ ಹಿನ್ನೆಲೆ Uppinangady Police Station ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿ ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್‌ನಲ್ಲಿ ತಪಾಸಣೆ ನಡೆಸಿದರು.

ತಪಾಸಣೆಯ ವೇಳೆ ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್‌ಗಳು ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ 5 ಕ್ಯಾನ್‌ಗಳಲ್ಲಿ ಒಟ್ಟು ಸುಮಾರು 4,175 ಲೀಟರ್ ಡೀಸೆಲ್ ಸಂಗ್ರಹಿಸಿರುವುದು ಪತ್ತೆಯಾಯಿತು. ಅಲ್ಲದೆ ಸ್ಥಳದಲ್ಲಿ ಇನ್ನಷ್ಟು ಖಾಲಿ ಬ್ಯಾರೆಲ್‌ಗಳು, ಕ್ಯಾನ್‌ಗಳು ಮತ್ತು ಇತರ ವಸ್ತುಗಳೂ ಪತ್ತೆಯಾಗಿವೆ.
ಪತ್ತೆಯಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 3.50 ಲಕ್ಷ ರೂ. ಆಗಿದೆ. ವಿಚಾರಣೆ ವೇಳೆ ಜಗದೀಶ್ ಅವರು ಯಾವುದೇ ಪರವಾನಿಗೆ ಇಲ್ಲದೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅಕ್ರಮವಾಗಿ ಡೀಸೆಲ್ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 35/2026 ದಾಖಲಿಸಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 287, 3(5), ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7 ಹಾಗೂ ಪೆಟ್ರೋಲಿಯಂ ಕಾಯ್ದೆ 1934ರ ಕಲಂ 23 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ

Leave a Reply

Your email address will not be published. Required fields are marked *