ಪುತ್ತೂರು: ಕೇಪು ಜಾತ್ರೆಯಲ್ಲಿ ನಡೆಯುವ ಕೋಳಿ ಅಂಕ ಧಾರ್ಮಿಕ ಹಿನ್ನೆಲೆಯುಳ್ಳ ಸಂಪ್ರದಾಯವಾಗಿದ್ದು, ಸ್ಥಳೀಯರ ಮನವಿ ಮೇರೆಗೆ ಶಾಸಕರು ಪೊಲೀಸರೊಂದಿಗೆ ಚರ್ಚಿಸಿ ಒಂದು ದಿನ ಕೋಳಿ ಅಂಕಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಪುತ್ತೂರಿನಲ್ಲಿ ಶಾಂತಿ ಕದಡುವ ಹಾಗೂ ಗಲಾಟೆ ಸೃಷ್ಟಿಸುವ ಉದ್ದೇಶದಿಂದ ಬಿಜೆಪಿಯವರು ಮರುದಿನ ಕೋಳಿ ಅಂಕ ನಡೆಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಆರೋಪಿಸಿದ್ದಾರೆ.





ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಪು ಕೋಳಿ ಅಂಕದ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಶಾಸಕರ ವಿರುದ್ಧ ಹಾಗೂ ರಾಜ್ಯ ಸರಕಾರದ ನಿಲುವುಗಳ ಕುರಿತು ಅಸಭ್ಯ ಹಾಗೂ ಆಧಾರರಹಿತ ಆರೋಪಗಳನ್ನು ಹೊರಿಸಿರುವುದು ಖಂಡನೀಯವಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರ ಸಂವಿಧಾನಬದ್ಧವಾಗಿ, ಜಾತ್ಯಾತೀತವಾಗಿ ಯಾವುದೇ ಸಮುದಾಯಕ್ಕೂ ತೊಂದರೆಯಾಗದಂತೆ ಆಡಳಿತ ನಡೆಸುತ್ತಿದೆ. ಶಾಸಕರು ಕೇಪು ಕೋಳಿ ಅಂಕದ ವಿಚಾರದಲ್ಲಿ ಆ ಭಾಗದ ಜನರ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ತೆರಳಿ ಜನಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಬದಲಾಗಿ ಹಿಂದುಗಳ ಧಾರ್ಮಿಕ ಸಂಪ್ರದಾಯವನ್ನು ಕಾಪಾಡುವ ಕೆಲಸ ಮಾಡಿದ್ದಾರೆ ಎಂದು ಕೃಷ್ಣಪ್ರಸಾದ್ ಆಳ್ವ ಸಮರ್ಥಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭಜನಾ ಮಂದಿರಗಳು, ದೈವಸ್ಥಾನಗಳ ಅಡಿಸ್ಥಳ ಹಕ್ಕುಗಳನ್ನು ಜನರಿಗೆ ಸಿಗುವಂತೆ ಸರಕಾರದ ಮೂಲಕ ಆದೇಶ ಮಾಡಿಸಲಾಗಿದೆ. ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತರಲಾಗಿದೆ. ತಾಲೂಕಿನ ಎಲ್ಲಾ ದೇವಸ್ಥಾನಗಳಿಗೆ ಅನುದಾನ ನೀಡಲಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮೀರಿಯಾಗಿ, ಕೃಷಿಕರ ಹಿತಕ್ಕಾಗಿ ಅಡಿಕೆ ಬೆಳೆ ವಿಮೆ ಯೋಜನೆ, ತುಳು ಭಾಷೆಯ ರಕ್ಷಣೆ, ಕಂಬಳಕ್ಕೆ ಬೆಂಬಲ, ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಸೇರಿದಂತೆ ಸುಮಾರು ₹2008 ಕೋಟಿ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಇಂತಹ ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಜಿಲ್ಲಾಧ್ಯಕ್ಷರು ಮಾತನಾಡಲಿ ಎಂದು ಕೃಷ್ಣಪ್ರಸಾದ್ ಆಳ್ವ ಸವಾಲು ಹಾಕಿದರು.


ಶಾಸಕರ ವಿರುದ್ಧ ಟೀಕೆ ಮಾಡುವ ಸತೀಶ್ ಕುಂಪಲ ಅವರು ಗೌರವಾನ್ವಿತ ವಾಜಪೇಯಿ ವಿರಾಸತ್ ಕಾರ್ಯಕ್ರಮವನ್ನು ಪುತ್ತೂರಿನ ಒಂದು ಮೂಲೆಯಲ್ಲಿ ಅಲ್ಪ ಸಂಖ್ಯೆಯ ಜನರನ್ನು ಸೇರಿಸಿ ಸಣ್ಣ ಮಟ್ಟದಲ್ಲಿ ಮುಗಿಸಿರುವುದು ಬಿಜೆಪಿ ಜಿಲ್ಲಾಧ್ಯಕ್ಷರ ವೈಫಲ್ಯವಲ್ಲವೇ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರು ಜಿಲ್ಲೆಯಾದ್ಯಂತ ಸಂಚರಿಸಬೇಕಾಗಿದ್ದರೆ, ಪುತ್ತೂರಿನಲ್ಲಿಯೇ ಸೀಮಿತವಾಗಿದ್ದಾರೆ. ಅವರು ದಿನಕ್ಕೆ ಹತ್ತು ಬಾರಿ ಪುತ್ತೂರನ್ನು ಸುತ್ತಿದರೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸಾಧನೆಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಕೂಡಾ ಕೇಪುವಿನಲ್ಲಿ ಶಾಸಕರ ವಿರುದ್ಧ ಮಾತನಾಡಿದ್ದಾರೆ. ಕನಿಷ್ಠ ಮುಂದಿನ ದಿನವಾದರೂ ಗಾಂಧಾರಿ ನಂಜನ್ನು ಬಿಟ್ಟು ಪುತ್ತೂರಿನ ಅಭಿವೃದ್ಧಿಗೆ ನಮ್ಮೊಂದಿಗೆ ಸಹಕರಿಸಲಿ. ಅಶೋಕ್ ಕುಮಾರ್ ರೈ ಅವರನ್ನು ಯುವಕರ ತಂಡ ಅಭಿನಂದಿಸಿರುವುದನ್ನು ನೋಡಿ ಕಲಿಯಲಿ ಎಂದು ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ಬ್ಲಾಕ್ ಕಾಂಗ್ರೆಸ್ ವಕ್ತಾರ ರವೀಂದ್ರ ನೆಕ್ಕಿಲು, ಹಿಂದುಳಿದ ಘಟಕದ ಅಧ್ಯಕ್ಷ ಮೋನಪ್ಪ ಪೂಜಾರಿ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಉಪಸ್ಥಿತರಿದ್ದರು.

