ತೆರಿಗೆ ಸಂಗ್ರಹಣೆಯಲ್ಲಿ ಕಡಬ ತಾಲೂಕು ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡಿದೆ. ಅಧಿಕಾರಿಗಳು, ಸಿಬ್ಬಂದಿಯ ಕರ್ತವ್ಯ ಮತ್ತು ನಾಗರಿಕರ ಸಹಕಾರಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕಡಬ(ದಕ್ಷಿಣ ಕನ್ನಡ): ಕಡಬ ತಾಲೂಕು ತೆರಿಗೆ ಸಂಗ್ರಹಣೆಯಲ್ಲಿ ಮತ್ತೆ ರಾಜ್ಯದ ಗಮನ ಸೆಳೆದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇಕಡಾ 103ರಷ್ಟು ಸಾಧನೆ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಹೊಸ ತಾಲೂಕಾಗಿ ಘೋಷಣೆಯಾದ ಬಳಿಕ ನಿರಂತರವಾಗಿ ರಾಜ್ಯದಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿರುವುದು ವಿಶೇಷವಾಗಿದೆ.

ಗುರಿ ಮೀರಿ ಸಾಧನೆ: 2025-26ನೇ ಸಾಲಿನಲ್ಲಿ 21 ಗ್ರಾಮ ಪಂಚಾಯತ್‌ಗಳನ್ನು ಒಳಗೊಂಡ ತಾಲೂಕಿಗೆ 3.34 ಕೋಟಿ ರೂ. ತೆರಿಗೆ ಸಂಗ್ರಹಣೆಯ ಗುರಿ ನಿಗದಿಯಾಗಿತ್ತು. ಆದರೆ ಗುರಿಯನ್ನು ಮೀರಿ ಕಡಬ ತಾಲೂಕಿನಲ್ಲಿ 3.41 ಕೋಟಿ ರೂ.ಗೂ ಅಧಿಕ ಮೊತ್ತ ತೆರಿಗೆ ವಸೂಲಿ ಮಾಡಲಾಗಿದೆ. ಈ ಹಣಕಾಸು ವರ್ಷಾಂತ್ಯಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಈ ಸಾಧನೆ ಸಾಧ್ಯವಾದುದು ಗಮನಾರ್ಹ.

ಕಡಬ ತಾಲೂಕಿನ ಎಲ್ಲಾ 21 ಗ್ರಾಮ ಪಂಚಾಯತ್‌ಗಳು ಶೇ.100ಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹಣೆ ದಾಖಲಿಸಿವೆ.

ಸುಬ್ರಹ್ಮಣ್ಯ ಗ್ರಾ.ಪಂ. : 1 ಕೋಟಿ ರೂ.ಗೂ ಅಧಿಕ

ನೆಲ್ಯಾಡಿ : 33 ಲಕ್ಷ ರೂ.

ಕೌಕ್ರಾಡಿ : 29 ಲಕ್ಷ ರೂ.

ರಾಮಕುಂಜ : 20 ಲಕ್ಷ ರೂ.

ಕುಟ್ರುಪಾಡಿ : 19 ಲಕ್ಷ ರೂ.

ಬೆಳಂದೂರು : 17 ಲಕ್ಷ ರೂ.

ಸವಣೂರು : 16.5 ಲಕ್ಷ ರೂ.

ಆಲಂಕಾರು : 16.4 ಲಕ್ಷ ರೂ.

ಬಿಳಿನೆಲೆ : 15 ಲಕ್ಷ ರೂ.

ಮರ್ಧಾಳ : 15 ಲಕ್ಷ ರೂ.

ವಾಣಿಜ್ಯ ಕಟ್ಟಡಗಳು, ಮನೆಗಳು ಹಾಗೂ ಕೈಗಾರಿಕಾ ಕಟ್ಟಡಗಳಿಗೆ ವಿಧಿಸುವ ಕಾನೂನುಬದ್ಧ ತೆರಿಗೆಗಳ ಸಮಗ್ರ ವಸೂಲಾತಿಯೇ ಈ ಸಾಧನೆಗೆ ಕಾರಣವಾಗಿದೆ.

ನಾಗರಿಕರ ಜವಾಬ್ದಾರಿಯುತ ಸ್ಪಂದನೆ: ಹಳೆಯ ಬಾಕಿಗಳನ್ನು ಹೊರತುಪಡಿಸಿ ಪ್ರಸಕ್ತ ಸಾಲಿನ ತೆರಿಗೆ ಸಂಪೂರ್ಣ ವಸೂಲಿ ಆಗಿರುವುದು ನಾಗರಿಕರ ಜಾಗೃತ ಮನೋಭಾವವನ್ನು ತೋರಿಸುತ್ತದೆ. ಸರ್ಕಾರ ನೀಡಿದ ಆರಂಭಿಕ 3 ತಿಂಗಳ ಶೇ.5ರ ವಿನಾಯಿತಿಯ ಪ್ರಯೋಜನವನ್ನು ಜನತೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕುವಾರು ಪ್ರಗತಿ (ಶೇಕಡಾವಾರು):

ಕಡಬ : 103%

ಮೂಡುಬಿದ್ರೆ : 99%

ಉಳ್ಳಾಲ : 96%

ಸುಳ್ಯ : 95%

ಬೆಳ್ತಂಗಡಿ : 94%

ಮುಲ್ಕಿ : 91%

ಪುತ್ತೂರು : 90%

ಬಂಟ್ವಾಳ : 89%

ಮಂಗಳೂರು : 85%

ಒಟ್ಟು ಜಿಲ್ಲೆಯ ಸರಾಸರಿ ಸಂಗ್ರಹಣೆ ಶೇ.92 ಆಗಿದೆ.

ಇಒ ಪ್ರತಿಕ್ರಿಯೆ: ”ತೆರಿಗೆ ಸಂಗ್ರಹಣೆಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಮೀಣಾಭಿವೃದ್ಧಿಗೆ ತೆರಿಗೆ ಪಾವತಿ ಅತ್ಯಗತ್ಯ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಜಾಗೃತ ನಾಗರಿಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *