ಕಡಬ: ಆನೆ ದಂತವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರ ಅರಣ್ಯ ಸಂಚಾರಿ ದಳ, ಕಡಬದ ವ್ಯಕ್ತಿಯೊಬ್ಬರನ್ನು ಬಂಧಿಸಿದೆ.
ಬಂಧಿತನನ್ನು ಕಡಬ ಪೇಟೆಯಲ್ಲಿ ಮಟನ್ ಸ್ಟಾಲ್ ನಡೆಸುತ್ತಿದ್ದ ತಾಜು ಎಂದು ಗುರುತಿಸಲಾಗಿದೆ. ಆರೋಪಿ ಆನೆ ದಂತಗಳನ್ನು ಸಂಗ್ರಹಿಸಿ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡಲು ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಖಚಿತ ಮಾಹಿತಿಯ ಮೇರೆಗೆ ಮಂಗಳೂರಿನಿಂದ ಆಗಮಿಸಿದ ಪೊಲೀಸರ ಅರಣ್ಯ ಸಂಚಾರಿ ದಳದ ತಂಡ ಸೋಮವಾರ ಮಧ್ಯಾಹ್ನ ಕಡಬದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಂತಗಳ ಸಮೇತ ವಶಕ್ಕೆ ಪಡೆದಿದೆ. ವಶಪಡಿಸಿಕೊಂಡ ಆನೆ ದಂತದ ತೂಕ ಅಂದಾಜು 26 ಕೆ.ಜಿ. ಎಂದು ತಿಳಿದುಬಂದಿದೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಬಂಧನ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ.
ಅರಣ್ಯ ಇಲಾಖೆ ಹಾಗೂ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.




