ಕಡಬ, ಜ. 27: ಸವಿತಾ ಮಹರ್ಷಿ ಪೌರಾಣಿಕವಾಗಿ ಗುರುತಿಸಿಕೊಂಡ ಓರ್ವ ಮಹಾಪುರುಷರಾಗಿದ್ದಾರೆ. ಸವಿತಾ ಸಮಾಜದ ಆರಾಧ್ಯ ಮೂಲ ಪುರುಷರಾಗಿರುವ ಸವಿತಾ ಮಹರ್ಷಿ ಅಪಾರ ವೇದ ಪಾಂಡಿತ್ಯವನ್ನು ಹೊಂದಿದ್ದರು ಎಂದು ಕಡಬ ಉಪ ತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಅವರು ನುಡಿದರು.

ಅವರು ಕಡಬ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ನೇತೃತ್ವದಲ್ಲಿ ಕಡಬ ತಾಲೂಕು ಸವಿತಾ ಸಮಾಜ ಸಂಘದ ಸಹಯೋಗದೊಂದಿಗೆ ಮಂಗಳವಾರ ಜರಗಿದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಣ್ಣ ಸಂಖ್ಯೆಯಲ್ಲಿರುವ ಸವಿತಾ ಸಮಾಜವು ಒಂದು ಕಾಲದಲ್ಲಿ ರಾಜಾಶ್ರಯವನ್ನು ಹೊಂದಿದ್ದ ಸಮಾಜ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಇಂದು ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ವಲಯದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿರುವ ಈ ಸಮಾಜವು ಈ ಭಾಗದಲ್ಲಿ ಶೈಕ್ಷಣಿಕವಾಗಿ ಇನ್ನಷ್ಟು ಹೆಚ್ಚಿನ ಒತ್ತನ್ನು ನೀಡುವ ಮೂಲಕ ಉನ್ನತ ಅವಕಾಶಗಳನ್ನು ಪಡೆಯುವಂತಾಗಬೇಕು ಎಂದರು.




ಕಡಬ ತಾಲೂಕು ಸವಿತಾ ಸಮಾಜ ಸಂಘದ ಮಾಜಿ ಅಧಕ್ಷ ವಸಂತ ಭಂಡಾರಿ ಮೂರಾಜೆ ಅವರು ಮಾತನಾಡಿ ಸವಿತಾ ಮಹರ್ಷಿಗಳು ಶಿವನ ಬಲಗಣ್ಣಿನಿಂದ ಜನಿಸಿದ ದಿವ್ಯ ಪುರುಷ. ಅವರು ಸೌರಶಕ್ತಿಯ ಪ್ರತೀಕವಾಗಿ ರಥಸಪ್ತಮಿಯಂದು ಭೂಮಿಗೆ ಅವತರಿಸಿದರು ಎನ್ನುವುದು ಪೌರಾಣಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿದೆ ಎಂದರು.
ಕಡಬ ತಾಲೂಕು ಸವಿತಾ ಸಮಾಜ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಎನ್.ಕೆ. ಮಾತನಾಡಿ ಸಮಾಜದ ಸ್ವಾವಲಂಬನೆ, ಕುಲ ಕಸುಬಿನ ಮೇಲಿನ ನಿಷ್ಠೆ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಸವಿತಾ ಮಹರ್ಷಿಗಳ ತತ್ವಗಳು ದಾರಿದೀಪವಾಗಿದೆ ಎಂದರು.
ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕಡಬ ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ಗೌಡ ಪೊಯ್ಯೆತಡ್ಡ, ಕಡಬ ತಾಲೂಕು ಸವಿತಾ ಸಮಾಜ ಸಂಘದ ಅಧ್ಯಕ್ಷ ರಧೀಶ್ ನೆಟ್ಟಣ, ಕಾರ್ಯದರ್ಶಿ ಸುಂದರ ಭಂಡಾರಿ ದೇರಾಜೆ, ಪದಾಧಿಕಾರಿಗಳಾದ ರಾಜ ಕಡಬ, ನಾಗೇಶ್ ದೇರಾಜೆ, ಸುರೇಶ್ ಮೂರಾಜೆ, ಗಿರೀಶ್ ದೇರಾಜೆ, ನಾರಾಯಣ ಕಲ್ಲುಗುಡ್ಡೆ, ಕಂದಾಯ ಇಲಾಖೆ, ಸರ್ವೆ ಇಲಾಖೆ, ಖಜಾನೆ ಇಲಾಖೆಯ ಸಿಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಂದಾಯ ಇಲಾಖಾ ಸಿಬ್ಬಂದಿ ಉದಯ ಪಿ.ಆರ್. ನೆಟ್ಟಣ ಸ್ವಾಗತಿಸಿ, ವಂದಿಸಿದರು.




