ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ, ಕಳೆದ ಏಳು ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.





ಸದರಿ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿದ್ದರೂ, ಆತ ದಸ್ತಗಿರಿಗೆ ಲಭ್ಯವಾಗದೆ ಪರಾರಿಯಾಗಿದ್ದರಿಂದ, ಪರಾರಿಯಾದ ಆರೋಪಿಯಾಗಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಇದೀಗ ದಿನಾಂಕ 03-02-2026 ರಂದು, ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ದಕ್ಷಿಣ ಉಪವಿಭಾಗ ಹಾಗೂ ಮಾನ್ಯ ಪೊಲೀಸ್ ನಿರೀಕ್ಷಕರು, ಕಂಕನಾಡಿ ನಗರ ಪೊಲೀಸ್ ಠಾಣೆ ಇವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪನಿರೀಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.


ಠಾಣಾ ಸಿಬ್ಬಂದಿಗಳಾದ ಮುಖ್ಯ ಆರಕ್ಷಕ (HC) 944 ಬಾಲರಾಜ್ ಹಾಗೂ ಆರಕ್ಷಕ (PC) 3046 ರವಿಕುಮಾರ್ ಅವರು ಕೇರಳ ರಾಜ್ಯದ ಕೊಲ್ಲಂ ನಗರದ ವಟ್ಟಕುಟ್ಟು ಲಲಿತ ಮಂದಿರಮ್ ಪ್ರದೇಶದಲ್ಲಿರುವ ಆರೋಪಿಯ ನಿವಾಸದ ಮೇಲೆ ದಾಳಿ ನಡೆಸಿ, ಆರೋಪಿಯನ್ನು ಯಶಸ್ವಿಯಾಗಿ ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಜಯಚಂದ್ರ (66), ತಂದೆ ಮುರುಗಪ್ಪನ್ ಆಚಾರ್ಯ, ವಾಸ: ಲಲಿತ ಮಂದಿರ, ವಟ್ಟಕುಟ್ಟು ಜಂಕ್ಷನ್ ಹತ್ತಿರ, ಕೊಲ್ಲಂ, ಕೇರಳ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2019, ಭಾರತೀಯ ದಂಡ ಸಂಹಿತೆ ಕಲಂ 409 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ


