ಪುತ್ತೂರು: ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ಅವರ ಅಮಾನತು ಕ್ರಮವನ್ನು ಉಡುಪಿ–ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆ ಕುರಿತು ವಿದ್ಯಾರ್ಥಿನಿಯರು ನಡೆಸಿದ ನ್ಯಾಯಸಮ್ಮತ ಪ್ರತಿಭಟನೆಗೆ ಸ್ಪಂದಿಸಿದ ಅಧಿಕಾರಿಯನ್ನು ಬಲಿಪಶು ಮಾಡಿರುವುದು ಶಾಸಕ ಅಶೋಕ್ ರೈ ಅವರ ‘ಒಣ ಪ್ರತಿಷ್ಠೆ’ಯ ನಡೆ ಎಂದು ಅವರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಧೂಳಿನ ಸಮಸ್ಯೆ, ತರಗತಿ ಕೊಠಡಿಗಳ ಕೊರತೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಅಭಾವದ ಬಗ್ಗೆ ಪ್ರತಿಭಟನೆ ನಡೆಸಿದ್ದರು. ಹಳೆಯ ಜೈಲು ಕಟ್ಟಡದಲ್ಲಿ ನಡೆಯುತ್ತಿರುವ ಈ ಕಾಲೇಜಿನಲ್ಲಿ ಐನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕನಿಷ್ಠ ಸೌಲಭ್ಯಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಡಿಜಿಟಲ್ ಕ್ಲಾಸ್ ಹಾಗೂ ಪ್ರೊಜೆಕ್ಟರ್ ಇದ್ದರೂ ಬಳಸಲು ಅಗತ್ಯ ಜಾಗವಿಲ್ಲ. ಕೊಠಡಿಗಳಲ್ಲಿ ಗಾಳಿ–ಬೆಳಕಿನ ಕೊರತೆ, ಫ್ಯಾನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು, ಶೌಚಾಲಯಗಳ ಕೊರತೆ ಹಾಗೂ ಕಲಾ, ವಾಣಿಜ್ಯ, ಹಿಂದಿ ಮತ್ತು ಇಂಗ್ಲಿಷ್ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆ ಇರುವುದಾಗಿ ಅವರು ವಿವರಿಸಿದರು.
ಸಮೀಪದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಉಂಟಾಗುತ್ತಿರುವ ಧೂಳಿನ ಸಮಸ್ಯೆ ನಿಯಂತ್ರಣಕ್ಕೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡದೆ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಪ್ರಾಂಶುಪಾಲರನ್ನು ಅಮಾನತು ಮಾಡಿಸಿರುವುದು ಆಡಳಿತ ವೈಫಲ್ಯವೆಂದು ಕಿಶೋರ್ ಕುಮಾರ್ ಆರೋಪಿಸಿದರು.

ಯಾವುದೇ ಸಮಗ್ರ ವಿಚಾರಣೆ ಇಲ್ಲದೆ ಕೈಗೊಳ್ಳಲಾದ ಅಮಾನತು ಆದೇಶವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಕಾಲೇಜಿಗೆ ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯ, ಗಾಳಿ–ಬೆಳಕಿನ ವ್ಯವಸ್ಥೆ ಒದಗಿಸಬೇಕು ಹಾಗೂ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಾಂಶುಪಾಲರ ಅಮಾನತು ಹಿಂಪಡೆಯದಿದ್ದರೆ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ, ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಿಶೋರ್ ಕುಮಾರ್ ಸರ್ಕಾರ ಮತ್ತು ಸ್ಥಳೀಯ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *