ಪುತ್ತೂರು, ಡಿ.21:
ವಿಟ್ಲ ಸಮೀಪದ ಇತಿಹಾಸ ಪ್ರಸಿದ್ಧ ಕೇಪು ಉಳ್ಳಾಲ್ತಿ ದೈವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ, ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಹರಕೆ ರೂಪದ ಕೋಳಿ ಅಂಕ ಕಾರ್ಯಕ್ರಮಕ್ಕೆ ಪೊಲೀಸರು ಅಡ್ಡಿಪಡಿಸಿ 17 ಮಂದಿ ಭಕ್ತರನ್ನು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ.

ಘಟನೆಯ ವಿಷಯ ತಿಳಿದ ತಕ್ಷಣವೇ ವಿಧಾನ ಪರಿಷತ್ ಸದಸ್ಯರಾದ ಶಾಸಕ ಶ್ರೀ ಕಿಶೋರ್ ಕುಮಾರ್ ಅವರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ, ಅಲ್ಲಿಯೇ ಕಾದು ಕುಳಿತು ಇನ್ಸ್‌ಪೆಕ್ಟರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಸ್ಥಳೀಯ ಧಾರ್ಮಿಕ ಆಚರಣೆಗಳ ಹಿನ್ನೆಲೆ, ಜಾನಪದ ಸಂಪ್ರದಾಯದ ಮಹತ್ವ ಹಾಗೂ ದೈವ ನಂಬಿಕೆಯ ಕುರಿತು ಅಧಿಕಾರಿಗಳಿಗೆ ಸಮಗ್ರವಾಗಿ ಮನವರಿಕೆ ಮಾಡಿಕೊಟ್ಟರು.

ಶಾಸಕ ಕಿಶೋರ್ ಕುಮಾರ್ ಮಾತನಾಡಿ,
“ಇದು ಯಾವುದೇ ರೀತಿಯ ಜೂಜಾಟವಲ್ಲ. ದೈವದ ಸನ್ನಿಧಿಯಲ್ಲಿ ಭಕ್ತರು ತಮ್ಮ ಹರಕೆಯನ್ನು ತೀರಿಸುವ ಪವಿತ್ರ ಆಚರಣೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಕಾನೂನುಬಾಹಿರ ಚಟುವಟಿಕೆಯಂತೆ ಪರಿಗಣಿಸುವುದು ಸರಿಯಲ್ಲ. ಇದು ಜನರ ನಂಬಿಕೆ, ಶ್ರದ್ಧೆ ಮತ್ತು ಭಕ್ತಿಯ ಪ್ರತೀಕ” ಎಂದು ಹೇಳಿದರು.

ಶಾಸಕರ ಸ್ಪಷ್ಟ ನಿಲುವು ಹಾಗೂ ಸ್ಥಳೀಯ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ವಿಚಾರಣೆಯ ಬಳಿಕ ವಶಕ್ಕೆ ಪಡೆದಿದ್ದ ಎಲ್ಲಾ 17 ಮಂದಿ ಭಕ್ತರನ್ನು ಬಿಡುಗಡೆಗೊಳಿಸಿದರು.

ಜಾತ್ರಾ ಮಹೋತ್ಸವದ ಸಂಭ್ರಮದ ವೇಳೆ ಭಕ್ತರಿಗೆ ಅನಗತ್ಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶಾಸಕ ಕಿಶೋರ್ ಕುಮಾರ್ ಅವರು ತಕ್ಷಣ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಿರುವುದಕ್ಕೆ ಸ್ಥಳೀಯ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀ ಸಂಜೀವ ಮಠಂದೂರು, ಹಿರಿಯ ಮುಖಂಡರಾದ ಶ್ರೀ ಚನಿಲ ತಿಮ್ಮಪ್ಪ ಶೆಟ್ಟಿ, ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಶ್ರೀ ದಯಾನಂದ ಉಜಿರೆಮಾರ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ದೈವಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *