ರಾಜ್ಯದ ಬಸ್ ನಿಲ್ದಾಣಗಳನ್ನು ಪ್ರಯಾಣಿಕರ ಸ್ನೇಹಿಯಾಗಿಸುವಂತೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲ ಸೌಲಭ್ಯ ಒದಗಿಸುವಂತೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಸರಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದ ಹಲವಾರು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ವಿಕಲಚೇತನರಿಗೆ ರಾಂಪ್, ಸಿಸಿ ಟಿ.ವಿ., ಪೊಲೀಸ್ ಚೌಕಿ, ಅಗ್ನಿ ಶಾಮಕ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳ ಕುರಿತು ಕಿಶೋರ್ ಕುಮಾರ್ ಪುತ್ತೂರು ಸಾರಿಗೆ ಸಚಿವರಿಗೆ ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಸಾರಿಗೆ ಸಚಿವರು, ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿವೆ. ಅವುಗಳ ವ್ಯಾಪ್ತಿಯಲ್ಲಿ ಒಟ್ಟು 565 ಬಸ್ ನಿಲ್ದಾಣಗಳಿವೆ. ಅವುಗಳಲ್ಲಿ ಜಿಲ್ಲಾ ಕೇಂದ್ರ-90 ತಾಲೂಕು ಕೇಂದ್ರ-186, ಹೋಬಳಿ ಕೇಂದ್ರ-284 ಮತ್ತು ಇತರ ಸ್ಥಳಗಳಲ್ಲಿ 5 ಬಸ್ ನಿಲ್ದಾಣಗಳೆಂದು ವರ್ಗೀಕರಿಸಲಾಗಿದೆ ಎಂದು ತಿಳಿಸಿದರು.
ಇವುಗಳ ಪೈಕಿ ಕೇವಲ 142 ಬಸ್ ನಿಲ್ದಾಣಗಳಲ್ಲಿ ಸಿಸಿ ಟಿ.ವಿ. ವ್ಯವಸ್ಥೆ, 61 ಬಸ್ ನಿಲ್ದಾಣದಲ್ಲಿ ಮಾತ್ರ ಪೊಲೀಸ್ ಚೌಕಿಗಳನ್ನು ಸ್ಥಾಪಿಸಲಾಗಿದೆ, 198 ಬಸ್ ನಿಲ್ದಾಣದಲ್ಲಿ ಅಗ್ನಿಶಾಮಕ ವ್ಯವಸ್ಥೆ ಇರುತ್ತದೆ. ಸದರಿ ಸಾರಿಗೆ ನಿಗಮಗಳ ಬಸ್ ನಿಲ್ದಾಣಗಳ ಅಭಿವೃದ್ಧಿ, ದುರಸ್ತಿ ಮತ್ತು ನಿರ್ವಹಣೆಗೆ 2023-24ನೇ ಸಾಲಿನಲ್ಲಿ ಕೇವಲ ರೂ.4.17 ಕೋಟಿ 2024-25ನೇ ಸಾಲಿನಲ್ಲಿ ರೂ.19.25 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ ಮತ್ತು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಚೌಕಿ ಅಥವಾ ಭದ್ರತಾ ಸಿಬ್ಬಂದಿ ನಿಯೋಜನೆ ಕುರಿತು ನಿರ್ದಿಷ್ಟ ಮಾರ್ಗಸೂಚಿ ಇರುವುದಿಲ್ಲ.

ರಾಜ್ಯದ ಹೆಚ್ಚಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಶೌಚಾಲಯಗಳು ಸರಿಯಾಗಿ ನಿರ್ವಹಣೆಯಾಗದೆ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿಯಿದೆ. ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಅಗತ್ಯವಿದೆ. ಬಸ್ ನಿಲ್ದಾಣಗಳಲ್ಲಿ ರಾತ್ರಿ ಸಮಯದಲ್ಲಿ ಪೊಲೀಸ್ ಭದ್ರತೆ ಕೊರತೆಯಿಂದ ಕಳ್ಳತನ ಮತ್ತು ಕಿರುಕುಳದ ಘಟನೆಗಳು ನಡೆಯುತ್ತಿದ್ದು, ಈ ಬಗ್ಗೆ ಗೃಹ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಶಾಶ್ವತ ಪೊಲೀಸ್ ಭದ್ರತೆ ನೀಡಲು ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಪ್ರದೇಶಗಳ ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಮತ್ತು ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳೇ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇಂತಹ ನಿಲ್ದಾಣಗಳನ್ನು ಗುರುತಿಸಿ ಅವುಗಳನ್ನು ಸುಧಾರಿಸಲು ವಿಶೇಷ ಅನುದಾನ ನೀಡಬೇಕು. ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳ ಮೂಲಭೂತ ಸೌಲಭ್ಯಗಳ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಮಾದರಿ ಬಸ್ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸುವ ಪ್ರಾಮಾಣಿತ ಕಾರ್ಯಾಚರಣೆ ವಿಧಾನ(ಎಸ್‍ಒಪಿ) ರೂಪಿಸಬೇಕು. ದ.ಕ. ಜಿಲ್ಲೆಯ ಕಡಬ, ಮೂಡಬಿದ್ರೆ, ಮತ್ತು ಮುಲ್ಕಿ ಪಟ್ಟಣವು ತಾಲೂಕು ಕೇಂದ್ರಗಳಾಗಿದ್ದು ಇಲ್ಲಿ ಹೊಸ ಬಸ್ ನಿಲ್ದಾಣವನ್ನು ಕೂಡಲೇ ನಿರ್ಮಿಸಬೇಕು. ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಹೆಚ್ಚಿನವು ಗ್ರಾಮೀಣ ಪ್ರದೇಶವಿದ್ದು ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಸಂಜೆ ಸೂಕ್ತ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಪ್ರಸ್ತುತವಿರುವ ಬಸ್ ರೂಟ್ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಬೇಡಿಕೆಯಂತೆ ಪರಿಷ್ಕರಿಸಬೇಕು ಎಂದು ಕಿಶೋರ್ ಕುಮಾರ್ ಸರಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದ ಕಂದಾಯ ಇಲಾಖೆಯಡಿ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲ ಸೌಲಭ್ಯದ ಬಗ್ಗೆ ಅಧಿವೇಶನದಲ್ಲಿ ಕಿಶೋರ್ ಕುಮಾರ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಕಂದಾಯ ಸಚಿವರು, ರಾಜ್ಯದಲ್ಲಿ ಒಟ್ಟು 29,326 ಕಂದಾಯ ಗ್ರಾಮಗಳಿದ್ದು ಸದರಿ ಗ್ರಾಮಗಳಿಗೆ 9842 ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಮಂಜೂರಾಗಿದೆ. ಅವುಗಳ ಪೈಕಿ 1,115 ಹುದ್ದೆಗಳು ಖಾಲಿ ಇದೆ.(ದ.ಕ. ಜಿಲ್ಲೆಯಲ್ಲಿ 46 ಮತ್ತು ಉಡುಪಿಯಲ್ಲಿ 22) 378 ಗ್ರಾಮ ಆಡಳಿತ ಅಧಿಕಾರಿ ಕಛೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತೆದೆ (ದ.ಕ. ಜಿಲ್ಲೆಯಲ್ಲಿ 10) ಕಛೇರಿಗೆ ಅಂತರ್ಜಾಲ ಸಂಪರ್ಕ ಒದಗಿಸಿರುವುದಿಲ್ಲ ಮತ್ತು ವಿದ್ಯುತ್ ಬಿಲ್ ಹಾಗೂ ಅಂತರ್ಜಾಲ ಸಂಪರ್ಕ ವೆಚ್ಚಕ್ಕಾಗಿ ಯಾವುದೇ ಅನುದಾನವು ಪ್ರತ್ಯೇಕವಾಗಿ ಬಿಡುಗಡೆಯಾಗುವುದಿಲ್ಲ. ರಾಜ್ಯದ 550 ಗ್ರಾಮಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿ ನಿರ್ಮಿಸಲು ನಿವೇಶನ ಕಾಯ್ದಿರಿಸಿದ್ದು ಸದರಿ ಕಛೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಯಾವುದೇ ಯೋಜನೆ ಸರ್ಕಾರದ ಮುಂದಿರುವುದಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸುವಂತೆ, ಸದರಿ ಅಧಿಕಾರಿಗಳು ಸರ್ಕಾರದ ಹೆಚ್ಚಿನ ಕೆಲಸಗಳನ್ನು ಆನ್‍ಲೈನ್‍ನಲ್ಲಿ ನಿರ್ವಹಿಸಬೇಕಾಗಿರುವುದರಿಂದ ಎಲ್ಲಾ ಕಛೇರಿಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲು ಸೂಕ್ತ ಕ್ರಮ ವಹಿಸುವಂತೆ ಮತ್ತು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಛೇರಿಗಳಿಗೆ ಸ್ವಂತ ಕಟ್ಟಡ ನಿರ್ಮಿಸುವಂತೆ ಕಿಶೋರ್ ಕುಮಾರ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *