ಪುತ್ತೂರು : ಅನುಚಿತ ವರ್ತನೆ, ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿರುವ ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ತಕ್ಷಣ ಬಂಧನ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಆಗ್ರಹಿಸಿದೆ.

ಸೋಮವಾರ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮತ್ತು ಉಪಾಧ್ಯಕ್ಷ ರೋಷನ್ ಲೋಬೋ, ವೇಣೂರು ಠಾಣೆಯಲ್ಲಿ ಅತ್ಯಾಚಾರ ಪ್ರಕರಣವೂ ದಾಖಲಾಗಿರುವ ಹಿನ್ನೆಲೆ ಸಂದೇಶ್ ವಿರುದ್ಧ ಕಾನೂನು ಕ್ರಮ ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಮಾನತು ರದ್ದಾದಲ್ಲಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಗೆ ವರ್ಗಾವಣೆ ಮಾಡಬೇಕು. ಮಾನವ ಹಕ್ಕುಗಳ ಉಲ್ಲಂಘನೆ, ಮಹಿಳೆ ಮತ್ತು ಮಕ್ಕಳ ಮೇಲೆ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಕಂಪೌಂಡ್ ಹಾರಿ ವಾಹನಕ್ಕೆ ತುಳಿದ ಪ್ರಕರಣದಲ್ಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ತಿಳಿಸಿದರು.
ಸಂದೇಶ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಉನ್ನತ ಮಟ್ಟದ ತನಿಖಾ ತಂಡದಿಂದ ತನಿಖೆ ನಡೆಸಿ, ಸರಿಯಾದ ರೀತಿಯಲ್ಲಿ ಸಾಕ್ಷ್ಯ ಸಂಗ್ರಹಿಸಬೇಕು. ಈಗಾಗಲೇ ಬಿತ್ತರಗೊಂಡಿರುವ ವಿಡಿಯೋ ಮತ್ತು ಆಡಿಯೋಗಳನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು. ಪೊಲೀಸ್ ಸಮವಸ್ತ್ರದ ದುರುಪಯೋಗಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅವರ ಸಂಪತ್ತಿನ ಮೂಲವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಅವರು ತಮ್ಮ ಪ್ರಭಾವ ಬಳಸಿ ದೂರುದಾರರಿಗೆ ತೊಂದರೆ ನೀಡುವ ಸಾಧ್ಯತೆ ಇರುವುದರಿಂದ ಅಮಾನತು ನಂತರ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ತಿಳಿಸಿದರು. ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ 18 ತಿಂಗಳ ಕಾಲ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.
ಸಂದೇಶ್ ಅವರು ಕಾರ್ಕಳ, ಬಜಪೆ ಹಾಗೂ ಬೆಳ್ತಂಗಡಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಹಲವು ಆರೋಪಗಳನ್ನು ಎದುರಿಸಿದ್ದರು. ಈ ಹಿನ್ನೆಲೆ ಅವರಿಗೆ ನೀಡಲಾದ ಮುಖ್ಯಮಂತ್ರಿ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಕೆಆರ್‌ಎಸ್ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನ್ನಿ ಪಿಂಟೋ, ಕಾರ್ಯದರ್ಶಿಗಳಾದ ಶಿವರಾಜು ಮತ್ತು ನಾಗರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *