ಸುಬ್ರಮಣ್ಯ ನ. 22 : ಮಹ ತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿ ಜಾತ್ರೋತ್ಸವದಲ್ಲಿ ಪ್ರಧಾನ ಆಕರ್ಷಣೆ ರಥಗಳದ್ದೇ ಆಗಿದೆ.ಇದರ ಹಿಂದೆ ಅಡಗಿದೆ ಮೂಲ ನಿವಾಸಿಗಳ ಕರ ಕೌಶಲ್ಯ. ಕುಕ್ಕೆಯಲ್ಲಿ ಶುದ್ಧ ಷಷ್ಟಿಯಂದು ಎಳೆಯುವ ಬ್ರಹ್ಮರಥವು ನಾಡಿನ ಅತ್ಯಂತ ಎತ್ತರವಾದ ತೇರುಗಳಲ್ಲಿ ಒಂದು. ಇದನ್ನು ಬೆತ್ತದಿಂದಲೇ ಕಟ್ಟುತ್ತಾರೆ. ಇದನ್ನು ಎಳೆಯಲು ಕೂಡ ಬೆತ್ತವನ್ನೇ ಬಳಸುವುದು ವಿಶೇಷ. ಈ ರಥದಲ್ಲಿ ರಾಮಾಯಣ, ಮಹಾಭಾರತದ ಕೆತ್ತನೆಗಳು ಮನಮೋಹಕವಾಗಿದೆ. ಇದನ್ನು ಹಿಂದೆ 18 ಅಂತಸ್ತುಗಳಲ್ಲಿ ಕಟ್ಟುತ್ತಿದ್ದರು. ಅದು 7ಕ್ಕಿಳಿದು ಈಗ 5 ಆಗಿದೆ ಎಂದು ಹೇಳಲಾಗುತ್ತಿದೆ. ತಳಿರು ತೋರಣ, ಫಲ ಪುಷ್ಪಗಳು,ಅಸಂಖ್ಯಾತ ಬಾವುಟಗಳಿಂದ ಸಿಂಗರಿಸಲ್ಪಡುವ ಈ ಬ್ರಹ್ಮರಥವು ಭಕ್ತ ಸಾಗರದ ನಡುವೆ ರಾಜ್ಯ ಗಾಂಭೀರ್ಯದಿಂದ ರಥವೀದಿಯಲ್ಲಿ ಸಂಚರಿಸುತ್ತಿರುವುದನ್ನು ನೋಡುವುದೇ ವೈಭವ.ಈ ರಥವನ್ನು ವರ್ಷದಲ್ಲಿ ಒಮ್ಮೆ ಅಂದರೆ ಮಾರ್ಗಶಿರ ಶುದ್ದ ಷಷ್ಟಿಯ ದಿನ ಮಾತ್ರ ಎಳೆಯಲಾಗುತ್ತದೆ.

ಪಂಚಮಿ ರಥ : ಪಂಚಮಿ ರಥವನ್ನು ಶುದ್ಧ ಪಂಚಮಿ, ಶುದ್ಧ ಷಷ್ಠಿ, ಶಿವರಾತ್ರಿ, ಮಕರ ಸಂಕ್ರಮಣ,ಮೇಘ ಸಂಕ್ರಮಣಗಳಲ್ಲಿ ಎಳೆಯಲಾಗುತ್ತದೆ. ಇದಲ್ಲದೆ ಭಕ್ತಾದಿಗಳು ಹರಕೆ ಹೊತ್ತು ಸೇವೆ ಸಲ್ಲಿಸುವ ಆ ದಿನ ಕೂಡ ಪಂಚಮಿ ರಥ ಎಳೆಯಲಾಗುತ್ತದೆ. ಪಂಚಮಿ ರಥವನ್ನು ಕೂಡ ಬೆತ್ತದಿಂದಲೇ ರಥವನ್ನು ಕಟ್ಟಿಸಿಂಗರಿಸಲ್ಪಟ್ಟು ಬೆತ್ತದಿಂದಲೇ ಎಳೆಯಲಾಗುತ್ತದೆ.
ಮಲೆ ಮಕ್ಕಳ ಶ್ರಮ : ಕಾರ್ತಿಕ ಹುಣ್ಣಿಮೆಯಂದು ಶ್ರೀ ದೇವರಿಗೆ ಸಹಸ್ರನಾಮರ್ಚನೆ ನಡೆದ ಬಳಿಕ ರಥಗಳಿಗೆ ಗೂಟ ಪೂಜೆ ನಡೆದು ನಂತರ ಶ್ರೀ ದೇವಳದ ಪುರೋಹಿತರು ಮಲೆ ಕುಡಿಯ ಜನಾಂಗದ ಗುರಿಕಾರ್ರಿಗೆ ರಥ ಕಟ್ಟಲು ಪ್ರಸಾದ ರೂಪದಲ್ಲಿ ವೀಳ್ಯವನ್ನು ನೀಡುತ್ತಾರೆ. ಹುಣ್ಣಿಮೆಯ ಮಾರನೇ ದಿನ ಸುಮಾರು 35ಕ್ಕೂ ಅಧಿಕ ರಥ ಕಟ್ಟಲಿರುವ ಮೂಲ ನಿವಾಸಿ ಮಲೆಕುಡಿಯ ಜನಾಂಗದವರು,ಸದಸ್ಯರು ಕಾಡಿಗೆ ತೆರಳುತ್ತಾರೆ.ಅನೇಕ ತಂಡಗಳಾಗಿ ಕಾಡಿಗೆ ತೆರಳಿ ರಥ ಕಟ್ಟುವ ಬೆತ್ತ ಸಂಗ್ರಹಣೆ ಮಾಡಿ ಮರಳುತ್ತಾರೆ. ಯಾವುದೇ ಹಗ್ಗವನ್ನು ಬಳಸದೆ ಬರೀ ಬೆತ್ತವನ್ನು ಬಳಸಿ ವಿಶಿಷ್ಟವಾದ ಸುಂದರ ರಥವನ್ನು ಇಲ್ಲಿಯ ಮೂಲ ನಿವಾಸಿಗಳು ನಿರ್ಮಿಸುತ್ತಾರೆ. ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಮತ್ತೊಂದು ವಿಶೇಷ. ಕುಕ್ಕೆ ಕ್ಷೇತ್ರದ ಜಾತ್ರೆಯಲ್ಲಿ ರಥಗಳು ಪ್ರಧಾನವಾಗಿವೆ. ಆದುದರಿಂದ ಸಾಲಂಕೃತ ರಥಗಳು ಜಾತ್ರೆಯ ಮೆರೆಗನ್ನ ಇಮ್ಮಡಿಗೊಳಿಸುತ್ತವೆ. ಇದುವರೆಗೆ ವಿಶೇಷ ರಥದ ಮನೆಯೊಳಗಿದ್ದ ಬ್ರಹ್ಮರಥ, ಹಾಗೂ ಕೊಟ್ಟಿಗೆಯೊಳಗಿದ್ದ ಚಿಕ್ಕ ರಥ, ಚಂದ್ರಮಂಡಲ ರಥ, ಹೂವಿನ ತೇರುಗಳು,ಹೊರಬಂದಿವೆ. ಅಲ್ಲದೆ ಈತನಕ ದೇವಳದ ಉಗ್ರಾಣದಲ್ಲಿದ್ದ ರಥಗಳ ಶಿಖರಗಳನ್ನು ಹೊರಕ್ಕೆ ತರಲಾಗಿದೆ.




ಈ ಮೂಲಕ ಕಾಡಿನಿಂದ ಸಂಗ್ರಹಿಸಿದ ಬೆತ್ತವನ್ನು ಉಪಯೋಗಿಸಿಕೊಂಡು ಪವಿತ್ರವಾದ ಬ್ರಹ್ಮರಥವನ್ನು ಪೂರ್ವ ಶಿಷ್ಟ ಸಂಪ್ರದಾಯ ದಂತೆ ನಿರ್ಮಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ. ನಾಡಿನ ಇತರ ದೇವಸ್ಥಾನಗಳಲ್ಲಿ ಜಾತ್ರೆಯ ವೇಳೆ ರಚಿಸುವ ಹಗ್ಗವ ರಥವನ್ನು ಹಗ್ಗಗಳಿಂದ ರಚಿಸಿದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರ ಯಾವುದೇ ಹಗ್ಗ ಉಪಯೋಗಿಸದೆ ಕೇವಲ ಬಿದಿರು ಮರದ ಹಲಗೆ, ಹಾಗೂ ಬೆತ್ತವನ್ನು ಉಪಯೋಗಿಸಿ ರಥವನ್ನು ಕೌಶಲ್ಯ ಪುರಿತವಾಗಿ ಮೂಲ ನಿವಾಸಿಗಳು ನಿರ್ಮಿಸುತ್ತಿದ್ದಾರೆ. ಬಾರಿ ಗಾತ್ರದ ಬೆತ್ತವನ್ನು ಎಂಟು ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು ಆನಂತರ ರಥದ ಹಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ಬ್ರಹ್ಮರಥದ ಮೇಲ್ಭಾಗವನ್ನು ರಚಿಸುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ಯಾವುದೇ ಗಂಟುಗಳನ್ನು ಹಾಕಲಾಗುವುದಿಲ್ಲ. ಬದಲಾಗಿ ಬೆತ್ತವನ್ನು ಹೂವನ್ನು ಸುರಿಯುವ ಮಾದರಿಯಲ್ಲಿ ಸುರಿದು ರಥವನ್ನು ಗಟ್ಟಿ ಮಾಡಲಾಗುತ್ತದೆ.ಈ ಕಾರ್ಯದಲ್ಲಿ ಇದೀಗ ಮೂಲ ನಿವಾಸಿಗಳು ಶ್ರದ್ಧೆಯಿಂದ ನಿರತರಾಗಿದ್ದಾರೆ. ರಥಗಳನ್ನು ಅತ್ಯಂತ ವಿಶಿಷ್ಟ ಪೂರ್ಣ ಮತ್ತು ಸುಂದರವಾಗಿ ನಿರ್ಮಿಸುವ ಕೈಂಕಾರಿಯನ್ನು ಇವರು ತಲೆತಲಾಂತರದಿಂದ ಮಾಡಿಕೊಂಡು ಬರುತ್ತಿದ್ದಾರೆ.ಇದೀಗ ಹಿರಿಯರೊಂದಿಗೆ ಯುವ ಜನಾಂಗವು ಕೂಡ ಈ ದೇವರ ಈ ಸೇವೆಯಲ್ಲಿ ಭಾಗವಹಿಸುತ್ತ ಕಾರ್ಯಕ್ರಮ ಪ್ರವರ್ತರಾಗಿದ್ದಾರೆ.



