ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರುಒಂದು ವಾರಗಳ ಗಲ್ಫ್ ರಾಷ್ಟ್ರಗಳ ಪ್ರವಾಸದಲ್ಲಿದ್ದು ಪ್ರವಾಸದ ವೇಳೆ ಸೌದಿ ಅರೇಬಿಯಾದಅಲ್ ಜುಬೈಲ್‌ನಲ್ಲಿ ಕುಂಬ್ರ ಕೆಐಸಿ ಇದರ ಎಲೆವೇಶನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜುಬೈಲ್‌ಗೆ ಆಗಮಿಸಿದ ಶಾಸಕರನ್ನು ಅನಿವಾಸಿ ಭಾರತೀಯರು ಅದ್ದೂರಿಯಾಗಿ ಬರಮಾಡಿಕೊಂಡರು. ಎಲೆವೇಶನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹತ್ತು ಸಾವಿರಕ್ಕೂ ಮಿಕ್ಕಿ ಭಾರತೀಯ ಬಂಧುಗಳು ಸೌದಿ ಅರೇಬಿಯಾದಲ್ಲೇ ಇದ್ದಾರೆ ಎಂಬ ಮಾಹಿತಿ ದೊರಕಿದೆ. ವಿದೇಶದಲ್ಲಿ ಬಂದು ಉದ್ಯಮವನ್ನು ನಡೆಸಿ ಉದ್ಯಮದ ಒಂದು ಪಾಲು ಲಾಭಾಂಶದಲ್ಲಿ ತಮ್ಮ ದೇಶದಲ್ಲಿರುವ ವಿದ್ಯಾ ಸಂಸ್ಥೆಗಳು ಹಾಗೂ ಶೈಕ್ಷಣಿಕ ಉದ್ದೇಶಕ್ಕೆ ನೆರವು ನೀಡುತ್ತಿರುವುದು ಅಭಿನಂದನಾರ್ಹ ಕಾರ್ಯವಾಗಿದೆ ಎಂದು ಹೇಳಿದರು. ಶಿಕ್ಷಣ ಪಡೆದಾಗ ಮಾತ್ರ ನಾವು ಉತ್ತುಂಗ ಪದವಿಗೇರಲು ಸಾಧ್ಯವಾಗುತ್ತದೆ. ಭಾರತ ವಿಶ್ವಗುರುವಾಗಬೇಕಾದರೆ ಅದು ಭಾಷಣದಿಂದ ಸಾಧ್ಯವಿಲ್ಲ. ದೇಶದಲ್ಲಿರುವ ಪ್ರತೀಯೊಂದು ಮಗು ಕೂಡಾ ಶಿಕ್ಷಣ ಪಡೆಯಬೇಕು, ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಆಗಿದ್ದಲ್ಲಿ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಹೇಳಿದರು.




ಕುಂಬ್ರದ ಕೆಐಸಿ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯರು ಆಹೋರಾತ್ರಿ ಕೆಲಸ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದ ಶಿಕ್ಷಣ ಸಂಸ್ಥೆಯೊಂದು ಉತ್ತುಂಗಕ್ಕೆ ಬೆಳೆದರೆ ಅದು ಸಂತೋಷದ ವಿಚಾರವಾಗಿದೆ ಎಂದು ಹೇಳಿದ ಶಾಸಕರು ಮಕ್ಕಳಿಗೆ ಐಎಎಸ್, ಐಪಿಎಸ್ ,ಕೆಎಎಸ್ ತರಬೇತಿ ಶಿಕ್ಷಣವನ್ನು ಕೂಡಾ ನೀಡಿದರೆ ಉತ್ತಮ ಎಂದು ಹೇಳಿದರು.
ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಅವರು ಮಾತನಾಡಿ ಕೆಐಸಿ ಶಿಕ್ಷಣ ಸಂಸ್ಥೆಗೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಕೊಡಿಸುವಲ್ಲಿ ಮುತುವರ್ಜಿವಹಿಸುವುದಾಗಿ ಭರವಸೆ ನೀಡಿದರು. ವಿದೇಶಕ್ಕೆ ಬಂದು ಇಲ್ಲೇ ದುಡಿದು ಸಂಪಾದನೆ ಮಾಡಿ ಅದರ ಒಂದು ಪಾಲನ್ನು ಸಮಾಜಕ್ಕೆ ಅರ್ಪಣೆ ಮಾಡುವ ಮನೋಭಾವ ಎಲ್ಲಾ ಕಡೆಗಳಲ್ಲಿ ಮೂಡಿಬರಬೇಕಾದ ಅನಿವಾರ್ಯತೆ ಇಂದಿನ ಕಾಲದಲ್ಲಿದೆ. ದೇಶದ ಪ್ರತೀಯೊಬ್ಬರೂ ಶಿಕ್ಷಣದ ಕಡೆ ಒತ್ತು ಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಐಸಿ ಸಂಚಾಲಕರಾದ ಕೆ ಪಿ ಅಹ್ಮದ್ ಹಾಜಿ , ಸಿಂಡಿಕೇಟ್ ಸದಸ್ಯ ಯು ಟಿ ಇಫ್ತಿಕಾರ್, ತೌಸೀಫ್ ಅಹ್ಮದ್,ಪ್ಲಾಂಟ್ ಸೊಲ್ಯುಷನ್‌ನ ಅಸ್ಕಾಫ್,ತ್ವಾಹಿರ್ ಸಾಲ್ಮರ, ಭಾರತ್ ಮುಸ್ತಫಾ,ಇಂಜನಿಯರ್ ಫೈರೋಝ್ ಪಹದ್, ಮುಶ್ತಾಕ್ ಕೋಡಿಂಬಾಡಿ, ಆಸಿಫ್ ದರ್ಬೆ, ಫಾರೂಕ್ ಫೋರ್ಟು ಪೋಲಿಯೋ, ಶರೀಫ್ ಸಾಲ್ಮರ, ಹಾರಿಸ್ ಆರಂಡ ಮೊದಲಾದವರು ಉಪಸ್ಥಿತರಿದ್ದರು.



