ಮಂಗಳೂರು: ಓರ್ವ ವ್ಯಕ್ತಿಯು ಒಲಿಸಿಕೊಂಡ ಕಲೆಯು ನಿರಂತರವಾಗಿ ಅಭಿವೃದ್ಧಿಯಾಗುತ್ತಿರಬೇಕು. ಅದು ಅಮೃತವಾಹಿನಿಯಿಂದ ದೇಶದ ಗಡಿ ದಾಟಿ ವಿಸ್ತರಿಸಬೇಕು ಎಂದು ಕಲಾ ವಿಮರ್ಶಕಿ, ನೃತ್ಯ ಗುರು ವಿದುಷಿ ಪ್ರತಿಭಾ ಸಾಮಗ ಹೇಳಿದರು.
ನಗರದ ಕುದ್ಮುಲ್ ರಂಗರಾವ್ ಪುರ ಭವನದಲ್ಲಿ ವಿದುಷಿ ಅಮೃತಾ ವಿ. ಅವರ ರಂಗಪ್ರವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಕಾಲಮಾನದಲ್ಲಿ ಕಲಾಪರಂಪರೆಯ ಮನೆಯಲ್ಲಿ ಹುಟ್ಟಿದರೂ ಅದನ್ನು ಪೋಷಿಸಿಕೊಂಡು ಬರುವುದು ಸವಾಲಿನ ಕೆಲಸವೇ ಆಗಿದೆ. ಕಲಾವಿದೆಯ ಬದುಕಿನಲ್ಲಿ ರಂಗಪ್ರವೇಶವು ಆಕೆಯ ಸಾಮರ್ಥ್ಯವನ್ನು ಸಾಬೀತುಪಡಿಸುವ ಒಂದು ಪರೀಕ್ಷೆಯಿದ್ದಂತೆ. ದೀರ್ಘಕಾಲಮಾಡಿದ ನೃತ್ಯ ಅಭ್ಯಾಸವನ್ನು ನಿರಂತರವಾಗಿ ಪ್ರಸ್ತುತ ಪಡಿಸುವ ಈ ಕಾರ್ಯಕ್ರಮಹತ್ವದ್ದಾಗಿದೆ ಎಂದು ಅವರು ಹೇಳಿದರು.




ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ ಭಾರತೀಯ ಕಲಾಪರಂಪರೆಯು ಅಧ್ಯಾತ್ಮವನ್ನು ತಲುಪುವ ಹಾದಿಯಾಗಿದೆ ಎಂದು ಹೇಳಿದರು. ನೃತ್ಯಗುರು ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ಆಶೀರ್ಚನ ನೀಡಿದರು. ಸಿತಾರ್ ಗುರು ಅನಂತ ಸತ್ಯ ಸಂಜೀವ, ಗುರು ರಫೀಖ್ ಖಾನ್ , ನೃತ್ಯ ಗುರು ವಿದುಷಿ ಶಾರದಾಮಣಿ ಶೇಖರ್ , ವಿದುಷಿ ಶ್ರೀಲತಾ ನಾಗರಾಜ್, ಸಂಗೀತ ಗುರು ಗಿರಿಜಾ ಶಂಕರ್ ಹಾಗೂ ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಅವರನ್ನು ಕಲಾವಿದೆ ಅಮೃತಾ ಗೌರವಿಸಿದರು. ತಂದೆ ವಾಸುದೇವ ಪಿ, ತಾಯಿ ಪಿ. ರೂಪಾ ವಾಸುದೇವ್ , ತಂಗಿ ಅಕ್ಷತಾ ವಿ. ಉಪಸ್ಥಿತರಿದ್ದರು.

ರಂಗಪ್ರವೇಶ ಕಾರ್ಯಕ್ರಮದಲ್ಲಿ ಹಿಮ್ಮೇಳ ಕಲಾವಿದರಾಗಿ ನಟ್ಟುವಾಂಗಂನಲ್ಲು ವಿದುಷಿ ಶಾರದಾಮಣಿ ಶೇಖರ್ , ಹಾಡುಗಾರಿಕೆಯಲ್ಲಿ ಬೆಂಗಳೂರಿನ ವಿದ್ವಾನ್
ಕಾರ್ತಿಕ್ ಹೆಬ್ಬಾರ್, ಮೃದಂಗದಲ್ಲಿ ವಿದ್ವಾನ್ ಹರ್ಷ ಸಾಮಗ, ಕೊಳಲಿನಲ್ಲಿ ವಿದ್ವಾನ್ ಮುರಳೀಧರ್ ಉಡುಪಿ ಸಹಕರಿಸಿದರು. ವಿದುಷಿ ಮಂಜುಳಾ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.


